ರಾಷ್ಟ್ರೀಯ

ನತದೃಷ್ಟ ಬಾಲಕನಿಗೆ ಖುಲಾಯಿಸಿದ ಅದೃಷ್ಟ

Pinterest LinkedIn Tumblr

student

ನೋಯ್ಡಾ,ಸೆ.27: ಮೆಟ್ರೋ ನಿಲ್ದಾಣದ ಜನ ನಿಬಿಡ ಪ್ರದೇಶದಲ್ಲಿ ಬಾಲಕನೊಬ್ಬ ಕುಳಿತು ಶಾಲೆಯಲ್ಲಿ ನೀಡಲಾಗಿದ್ದ ಹೋಂವರ್ಕ್ ಬರೆಯುವುದರಲ್ಲಿ ತಲ್ಲೀನನಾಗಿದ್ದ. ಪಕ್ಕದಲ್ಲಿ ತೂಕ ಮಾಡುವ ಸಾಧನದ ಮೇಲೆ ಬಟ್ಟೆ ಹಾಕಲಾಗಿತ್ತು. ಅಲ್ಲಿ ಕೆಲವರು ದುಡ್ಡನ್ನು ಹಾಕುತ್ತಿದ್ದರು. ಇದನ್ನು ಗಮನಿಸಿದ ಮಹಿಳೆಯೊಬ್ಬಳು ಬಾಲಕ ಬಡತನದ ಕಥೆ ಕೇಳಿ ಮರುಗಿ ಫೇಸ್‍ಬುಕ್‍ನಲ್ಲಿ ಆತನ ಫೋಟೋ ಸಹಿತ ವಿವರಗಳನ್ನು ದಾಖಲಿಸಿದಳು. ಇದೀಗ ಆ ಬಾಲಕನಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.

ನೋಯ್ಡಾ ಸೆಕ್ಟರ್ 122ರಲ್ಲಿನ ಶ್ರೀ ಕೃಷ್ಣ ಇಂಟರ್ ಕಾಲೇಜಿನಲ್ಲಿ 13 ವರ್ಷದ ಬಾಲಕ ಹರೀಂದ್ರ ಸಿಂಗ್ ಚೌಹಾಣ್ 9ನೇ ತರಗತಿ ಓದುತ್ತಿದ್ದಾನೆ. ತನ್ನ ಶಾಲಾ ವೆಚ್ಚ ಭರಿಸಲು ಆತ ನಿಲ್ದಾಣದಲ್ಲಿ ಹಣಕ್ಕಾಗಿ ಪರಿತಪಿಸುತ್ತಿದ್ದಾನೆ. ನೋಯ್ಡಾ ಸೆಕ್ಟರ್ 51ರಲ್ಲಿ ಪುಟ್ಟದೊಂದು ಮನೆಯಲ್ಲಿರುವ ಬಾಲಕನೊಂದಿಗೆ ಐವರು ಕುಟುಂಬ ಸದಸ್ಯರು ವಾಸವಾಗಿದ್ದಾರೆ.

ಹರೀಂದರ್‍ಗೆ ಸಹಾಯ ಮಾಡುವುದಾಗಿ ಅನೇಕರು ಮುಂದೆ ಮುಂದೆ ಬಂದಿದ್ದಾರೆ. ಎರಡು ದಿನಗಳ ಹಿಂದೆ ಸಮಾಜವಾದಿ ಪಕ್ಷದ ನೋಯ್ಡಾ ಯುವ ಬ್ರಿಗೇಡ್‍ನ ಅಧ್ಯಕ್ಷ ಆಶ್ರಯ್ ಗುಪ್ತಾ ಬಾಲಕ ಶಿಕ್ಷಣಕ್ಕೆ ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ. ಇನ್ನು ಮುಂದೆ ಮೆಟ್ರೋ ನಿಲ್ದಾಣದಲ್ಲಿ ಹಣಕ್ಕಾಗಿ ಕುಳಿತುಕೊಳ್ಳದಂತೆ ಹೇಳಿದ್ದಾರೆ.

ಪ್ರತಿದಿನ ಬೆಳಗ್ಗೆ 6ಗಂಟೆಗೆ ಏಳುವ ಬಾಲಕ ಐದು ಕಿಲೋ ಮೀಟರ್ ದೂರವಿರುವ ಶಾಲೆಗೆ ನಡೆದುಹೋಗುತ್ತಾನೆ. ಶಾಲೆಯ ನಂತರ ಕಂಪ್ಯೂಟರ್ ತರಗತಿಯಲ್ಲಿ ಕಲಿಯುತ್ತಾನೆ. ತದ ನಂತರ ರಾತ್ರಿ 9ರವರೆಗೂ ಮೆಟ್ರೋ ನಿಲ್ದಾಣದಲ್ಲಿ ಕಾಲ ಕಳೆಯುತ್ತಾನೆ.

`ನನ್ನ ತಂದೆ 2013ರಲ್ಲಿ ಕೆಲಸ ಕಳೆದುಕೊಂಡರು. ತೂಕದ ಸಾಧನ ಖರೀದಿಸಿ ಮೆಟ್ರೋ ನಿಲ್ದಾಣದಲ್ಲಿ ಹಣ ಗಳಿಸುವ ಮೂಲಕ ಜೀವನೋಪಾಯ ಕಂಡುಕೊಂಡರು. ನನ್ನ ಪೋಷಕರು ಜೂನ್‍ನಲ್ಲಿ ಇತವಾವ್ಹ್‍ಗೆ ತೆರಳಿದ್ದು, ನಾನು ನನ್ನ ರಜಾ ದಿನಗಳ ಹೋಂವರ್ಕ್ ಬರೆಯುವುದರಲ್ಲಿ ತಲ್ಲೀನನಾದೆ. ನನಗೆ ಕೆಲವು ಪೇಪರ್‍ಗಳು, ಕಲರ್ಸ್, ಫೈಲ್‍ಗಳ ಅಗತ್ಯವಿದೆ. ಆದರೆ ನನ್ನಲ್ಲಿ ಹಣವಿಲ್ಲ. ಹಾಗಾಗಿ ನನ್ನ ತಂದೆಯ ತೂಕದ ಸಾಧನ ತೆಗೆದುಕೊಂಡು ಹಣಕ್ಕಾಗಿ ಮೆಟ್ರೋ ನಿಲ್ದಾಣಕ್ಕೆ ಬಂದೆ. ನಾನು ಗ್ರಾಹಕರಿಗಾಗಿ ಕಾಯುತ್ತಾ ಸಮಯ ವ್ಯರ್ಥ ಮಾಡಲು ಬಯಸಲಿಲ್ಲ. ಹಾಗಾಗಿ ತೂಕದ ಸಾಧನದ ಪಕ್ಕದಲ್ಲೇ ಬಟ್ಟೆ ಹಾಸಿ, ನನ್ನ ಕೆಲದಲ್ಲಿ ತಲ್ಲೀನನಾದೆ. ಮೊದಲ ದಿನ 60 ರೂ. ಗಳಿಸಿದೆ. ಇದೀಗ 200 ರೂ.ಗಳನ್ನು ಉಳಿಸಿದ್ದೇನೆ’ ಎಂದು ವಿವರಿಸಿದ.

ಈತನ ತಂದೆಗೆ ಪೊಲೀಯೋ ಬಂದು ನಡೆಯಲು ಕಷ್ಟಕರವಾಗಿದೆ. ಹರೀಂದರ್‍ಗೆ ಇಬ್ಬರು ಸಹೋದರರಿದ್ದು ವಿವೇಕ್(17) ಮತ್ತು ಹಿಮಾಂಶು(7) ಎಂಬುವರಾಗಿದ್ದಾರೆ. ಅತಿ ಪುಟ್ಟದಾದ ಕೋಣೆಯೊಂದರಲ್ಲಿ ಇಡೀ ಕುಟುಂಬ ವಾಸವಾಗಿದೆ. ಹರೀಂದರ್‍ನ ಇಷ್ಟವಾದ ವಿಷಯ ಗಣಿತ. ಈತ ತರಗತಿಯಲ್ಲಿ ಯಾವಾಗಲೂ ಮೊದಲ ಮೂರು ಸ್ಥಾನ ಗಳಿಸುತ್ತಾನೆ. ಸೇನಾ ಅಧಿಕಾರಿಯಾಗುವ ಕನಸು ಹೊತ್ತಿರುವ ಈತನಿಗೆ ಹಣವೇ ದೊಡ್ಡ ಸಮಸ್ಯೆಯಾಗಿದೆ.

Write A Comment