ಅಂತರಾಷ್ಟ್ರೀಯ

ಮಿನಾದಲ್ಲಿ ಕಾಲ್ತುಳಿತಕ್ಕೆ 700ಕ್ಕೂ ಅಧಿಕ ಬಲಿ: ಮೃತರಲ್ಲಿ ಇರಾನ್, ಮೊರೊಕ್ಕೊದ ಪ್ರಜೆಗಳು ಅಧಿಕ; 25 ವರ್ಷಗಳ ಅವಧಿಯಲ್ಲೇ ನಡೆದ ಅತಿ ಭೀಕರ ದುರಂತ

Pinterest LinkedIn Tumblr

hajj_ಮಿನಾ, ಸೆ.25: ಮುಸ್ಲಿಮರ ಪವಿತ್ರ ನಗರ ಸೌದಿ ಅರೇಬಿಯದ ಮಕ್ಕಾದ ಹೊರವಲಯದ ಮಿನಾದಲ್ಲಿ ಗುರುವಾರ ಸಂಭವಿಸಿದ ಕಾಲ್ತುಳಿತಕ್ಕೆ ಕನಿಷ್ಠ 717 ಹಜ್ ಯಾತ್ರಿಗಳು ಬಲಿಯಾಗಿದ್ದು, ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ.
121 ಬ್ರಿಟಿಷ್ ಯಾತ್ರಿಕರು ನಾಪತ್ತೆಯಾಗಿರುವುದಾಗಿಯೂ ಇತ್ತೀಚಿನ ವರದಿಗಳು ತಿಳಿಸಿವೆ.
ಕಳೆದ 25 ವರ್ಷಗಳ ಅವಧಿಯಲ್ಲೇ ಹಜ್ ಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ಎರಡನೆ ಭೀಕರ ದುರಂತ ಇದಾಗಿದೆ ಎಂದು ಬಣ್ಣಿಸಲಾಗಿದೆ.
ಸ್ಥಳೀಯ ಕಾಲಮಾನ ಗುರುವಾರ ಬೆಳಗ್ಗೆ 9 (ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ 11:30) ಗಂಟೆಗೆ ಜಮರಾತ್ ಹೆಸರಿನ ಬೃಹತ್ ನಿರ್ಮಾಣದಲ್ಲಿರುವ ಸೈತಾನನನ್ನು ಪ್ರತಿನಿಧಿಸುವ ಮೂರು ಬೃಹತ್ ಸ್ತಂಭಗಳಿಗೆ ಕಲ್ಲು ಎಸೆಯುವ ವಿಧಿಗಾಗಿ ಜನರು ಒಮ್ಮೆಲೆ ನುಗ್ಗಿದ ವೇಳೆ ಕಾಲ್ತುಳಿತ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಜಮರಾತ್ ರಚನೆಯತ್ತ ಸಾಗುವ ಮಿನಾ ಟೆಂಟ್ ನಗರದ ಎರಡು ಪ್ರಮುಖ ದಾರಿಗಳು ಸೇರುವ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದೆ.
ಗಾಯಾಳುಗಳ ಆಕ್ರಂದನ ಮುಗಿಲು ಮುಟ್ಟುತ್ತಿರುವಂತೆಯೇ ರಕ್ಷಣೆಯ ಹೊಣೆ ಹೊತ್ತಿರುವ ಸೌದಿ ಅರೇಬಿಯದ ಸಾವಿರಾರು ರಕ್ಷಣಾ ಸಿಬ್ಬಂದಿ ಯಾತ್ರಿಕರನ್ನು ನಿಯಂತ್ರಿಸಲು ತೀವ್ರ ಯತ್ನ ನಡೆಸಿರುವುದಾಗಿ ವರದಿಗಳು ತಿಳಿಸಿವೆ.ಶನಿವಾರದವರೆಗೂ ನಡೆಯಲಿರುವ ಹಜ್ ಯಾತ್ರೆಯು ಮಂಗಳವಾರ ಚಾಲನೆಗೊಂಡಿದ್ದು, ನಿಗದಿತ ಪ್ರದೇಶದಲ್ಲಿ ಭಾರೀ ಸಂಖ್ಯೆಯ ಯಾತ್ರಿಗಳು ಒಂದೇ ಸಮಯದಲ್ಲಿ ಧಾರ್ಮಿಕ ವಿಧಿ ನೆರವೇರಿಸಲು ಮುಂದಾಗಿದ್ದರು.

ಹಜ್ ಕಾಲ್ತುಳಿತ: ಸೌದಿ ಅರೇಬಿಯ ಮೇಲೆ ಒತ್ತಡ
ಜಿದ್ದಾ, ಸೆ.25: ಹಜ್ ಕಾಲ್ತುಳಿತದಲ್ಲಿ ಭಾರೀ ಸಾವು-ನೋವಿನ ಹಿನ್ನೆಲೆಯಲ್ಲಿ ಘಟನೆಗೆ ಉತ್ತರ ನೀಡಬೇಕಾಗಿರುವ ಸ್ಥಾನದಲ್ಲಿರುವ ಸೌದಿ ಅರೇಬಿಯದ ಮೇಲೆ ಒತ್ತಡ ಬೀಳಲಾರಂಭಿಸಿದೆ.
ಘಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಸೌದಿ ಅರೇಬಿಯದ ಪ್ರಾದೇಶಿಕ ಪ್ರತಿಸ್ಪರ್ಧಿ ಇರಾನ್, ಹಜ್ ಸಾವು-ನೋವಿಗೆ ಸೌದಿಯ ಮುಖಂಡರನ್ನು ದೂಷಿಸಿದೆ.
ಆದರೆ, ಸೌದಿ ಅಧಿಕಾರಿಗಳು ಘಟನೆಗೆ ಬೇರೆಯೇ ಆದ ವಿವರಣೆಯನ್ನು ನೀಡಿದ್ದಾರೆ. ಕೆಲವು ಹಜ್ ಯಾತ್ರಾರ್ಥಿಗಳು ತಮಗೆ ಒದಗಿಸಲಾಗಿರುವ ಮಾರ್ಗದರ್ಶನವನ್ನು ಪಾಲಿಸಿಲ್ಲ. ಇದರಿಂದ ಮಕ್ಕಾದ ಬಳಿ ಐದು ಅಂತಸ್ತುಗಳ ಜಮರಾತ್ ಸೇತುವೆಯಲ್ಲಿ ಅರ್ಧ ಮೈಲಿಯುದ್ದಕ್ಕೂ ಹಠಾತ್ ಜನಸಂದಣಿ ಉಂಟಾಗಿದೆ. ಜೊತೆಗೆ, ಪ್ರಖರ ಬಿಸಿಲು ಮತ್ತು ಆಯಾಸದಿಂದಲೇ ಕೆಲವು ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಫ್ರಿಕಾದ ದೇಶಗಳ ಕೆಲವು ಯಾತ್ರಾರ್ಥಿಗಳಿಂದ ಕಾಲ್ತುಳಿತ ಸಂಭವಿಸಿದೆ ಎಂದು ಸೌದಿ ಅರೇಬಿಯದ ಕೇಂದ್ರೀಯ ಹಜ್ ಸಮಿತಿಯ ಮುಖ್ಯಸ್ಥ, ರಾಜಕುಮಾರ ಖಾಲಿದ್ ಅಲ್-ಫೈಸಲ್ ದೂರಿದ್ದರು ಎನ್ನಲಾಗಿದೆ. ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸೌದಿ ಅಧಿಕಾರಿಗಳು ಈ ಮೇಲಿನ ವಿವರಣೆಯನ್ನು ನೀಡಿದ್ದಾರೆ.
ರಾಜಕುಮಾರ ಖಾಲಿದ್ ಹೇಳಿಕೆಯು ಸೌದಿ ಅರೇಬಿಯದ ಕರಿಯ ವಿರೋಧಿ ಜನಾಂಗೀಯವಾದವನ್ನು ತೋರ್ಪಡಿಸುತ್ತದೆ ಎಂದು ಫಿಲಡೆಲ್ಫಿಯದಲ್ಲಿ ನೆಲೆಸಿರುವ ಲೇಖಕ ಮತ್ತು ಪತ್ರಕರ್ತ ತಾರಿಕ್ ಫತಾಹ್ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ದೊರೆ ಸಂತಾಪ: ಸೌದಿ ಅರೇಬಿಯದ ಹೊಸ ದೊರೆ ಸಲ್ಮಾನ್ ಅವರು ದುರಂತಕ್ಕೆ ಸಂತಾಪ ವ್ಯಕ್ತಪಡಿಸುತ್ತ, ಘಟನೆಯ ಕುರಿತು ತ್ವರಿತ ತನಿಖೆಯ ಭರವಸೆಯನ್ನು ನೀಡಿದ್ದಾರೆ. ಮಕ್ಕಾದಲ್ಲಿ ಎರಡು ವಾರಗಳ ಅವಧಿಯಲ್ಲಿ ಎರಡು ದುರಂತ ಘಟನೆಗಳು ಸಂಭವಿಸಿರುವುದು ಸೌದಿ ಅರೇಬಿಯದ ಆಡಳಿತವನ್ನು ಅಲ್ಲಾಡಿಸಿದೆ.
ಮಕ್ಕಾದಲ್ಲಿ ಹಜ್ ಯಾತ್ರಾರ್ಥಿಗಳ ನಿರ್ವಹಣೆ ಮತ್ತು ಸಂಘಟನೆಯ ಗುಣಮಟ್ಟದ ಸುಧಾರಣೆಗೆ ಈಗಿರುವ ಯೋಜನೆಗಳು ಮತ್ತು ವ್ಯವಸ್ಥೆಗಳ ಪರಾಮರ್ಶೆಗೆ ತಾವು ಸೂಚನೆ ನೀಡಿರುವುದಾಗಿ ದೊರೆ ಸಲ್ಮಾನ್ ಹೇಳಿದ್ದಾರೆ.
ಕಾಲ್ತುಳಿತದಲ್ಲಿ ಮೃತಪಟ್ಟಿರುವ ಯಾತ್ರಾರ್ಥಿಗಳ ಪೈಕಿ ಬಹುತೇಕರು ಇರಾನ್ ನಾಗರಿಕರಾಗಿದ್ದಾರೆ (131 ಮಂದಿ). ಈ ಹಿನ್ನೆಲೆಯಲ್ಲಿ ಟೆಹರಾನ್‌ನಲ್ಲಿರುವ ಸೌದಿ ಅರೇಬಿಯದ ರಾಯಭಾರಿಯನ್ನು ಇರಾನ್‌ನ ವಿದೇಶಾಂಗ ಸಚಿವಾಲಯಕ್ಕೆ ಕರೆಸಿಕೊಳ್ಳಲಾಗಿತ್ತು ಎಂದು ವರದಿಗಳು ತಿಳಿಸಿವೆ.
ಜೊತೆಗೆ, ಇಂಡೋನೇಶ್ಯದ ಕೆಲವು ಹಜ್ ಯಾತ್ರಿಕರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಆದರೆ, ನಿರ್ದಿಷ್ಟ ಸಂಖ್ಯೆ ಇನ್ನೂ ಖಚಿತಗೊಂಡಿಲ್ಲ.

ಹಜ್ ಯೋಜನೆ ಮರುಪರಿಶೀಲನೆಗೆ ದೊರೆ ಆದೇಶ
ರಿಯಾದ್, ಸೆ.25: ಹಜ್ ಯಾತ್ರೆಯ ವೇಳೆ ಸಂಭವಿಸಿದ ದುರಂತದ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಸೌದಿಯ ದೊರೆ ಸಲ್ಮಾನ್, ರಾಷ್ಟ್ರದ ಹಜ್ ಯಾತ್ರೆ ಯೋಜನೆಯನ್ನು ಮರುಪರಿಶೀಲಿಸುವಂತೆ ಆದೇಶಿಸಿದ್ದಾರೆ.
ದುರಂತದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆಯೂ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಅವರು ಟಿವಿ ವಾಹಿನಿಯಲ್ಲಿ ಮಾಡಿದ ಪ್ರಸಾರ ಭಾಷಣದಲ್ಲಿ ತಿಳಿಸಿದ್ದಾರೆ.

ದುರಂತ ಸಂಭವಿಸಿರುವ ಪ್ರದೇಶದಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯ ಯಾತ್ರಾರ್ಥಿಗಳು ನೆರೆದಿದ್ದರು ಎಂದು ಆಂತರಿಕ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಮನ್ಸೂರ್ ಅಲ್ ತುರ್ಕಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ದುರಂತ ಸಂಭವಿಸಿದ್ದ ಸ್ಥಳದಲ್ಲಿ ಅಸಾಮಾನ್ಯ ಜನಸಂದಣಿಗೆ ಕಾರಣಗಳೇನು ಎಂಬುದನ್ನು ತಿಳಿಯುವ ನಿಟ್ಟಿನಲ್ಲಿ ತನಿಖೆ ನಡೆಯಲಿದೆ ಎಂದವರು ಹೇಳಿದ್ದಾರೆ.

ದುರಂತಕ್ಕೆ ಸೌದಿ ಅಧಿಕಾರಿಗಳೇ ಹೊಣೆ: ಪ್ರತ್ಯಕ್ಷದರ್ಶಿಗಳ ಆರೋಪ
ಮಕ್ಕಾ,ಸೆ.25: ಪವಿತ್ರ ಹಜ್ ಕರ್ಮದ ವೇಳೆ ಭೀಕರ ದುರಂತ ಸಂಭವಿಸಲು ಸೌದಿ ಅಧಿಕಾರಿಗಳೇ ನೇರ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಭಾರೀ ಸಾವು ನೋವುಗಳನ್ನು ಕಂಡು ಜರ್ಝರಿತರಾಗಿರುವ ಅವರು, ಉಳಿದಿರುವ ಧಾರ್ಮಿಕ ವಿಧಿ ವಿಧಾನಗಳನ್ನು ಮುಂದುವರಿಸುವ ಬಗ್ಗೆ ತಮ್ಮ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ. ಮಿನಾದಲ್ಲಿ ಶೈತಾನನಿಗೆ ಕಲ್ಲೆಸೆಯುವ ವಿಧಿಯ ಸಂದರ್ಭದಲ್ಲಿ ನಡೆದ ದುರ್ಘಟನೆಯಲ್ಲಿ 717 ಮಂದಿ ಮೃತಪಟ್ಟಿದ್ದು, 863ಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಳೆದ 25 ವರ್ಷಗಳಲ್ಲಿ ಇಲ್ಲಿ ಕಾಣಿಸಿಕೊಂಡ ಮಹಾದುರಂತ ಇದಾಗಿದ್ದು, ಭದ್ರತೆಯ ಬಗ್ಗೆ ಗಂಭೀರವಾದ ಪ್ರಶ್ನೆಗಳ ಉಗಮಕ್ಕೆ ಕಾರಣವಾಗಿದೆ.

ಯಾತ್ರಿಗಳು ತೋರಿದ ಅಶಿಸ್ತು ಹಾಗೂ ಸೂಚನೆಗಳನ್ನು ಗಣನೆಗೆ ತೆಗೆದುಕೊಳ್ಳದಿದ್ದದ್ದೇ ದುರಂತಕ್ಕೆ ಮೂಲ ಕಾರಣ ಎಂಬ ಸೌದಿ ಆರೋಗ್ಯ ಸಚಿವ ಖಾಲಿದ್ ಅಲ್ ಫಲೀಹ್‌ರ ಅಭಿಪ್ರಾಯವನ್ನು ಪ್ರತ್ಯಕ್ಷದರ್ಶಿಗಳು ತಳ್ಳಿಹಾಕಿದ್ದಾರೆ. ‘‘ಅಲ್ಲಿ ಭಾರೀ ದೊಡ್ಡ ಜನಜಂಗುಳಿಯಿತ್ತು. ಯಾತ್ರಿಗಳ ಕ್ಯಾಂಪ್‌ನ ಎಲ್ಲಾ ಆಗಮನ ಹಾಗೂ ನಿರ್ಗಮನ ದ್ವಾರಗಳನ್ನು ಮುಚ್ಚಿದ್ದ ಪೊಲೀಸರು, ಕೇವಲ ಒಬ್ಬನಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಿದ್ದರು’’ ಎಂದು 45 ವರ್ಷ ಪ್ರಾಯದ ಲಿಬಿಯನ್ ಯಾತ್ರಿಕ ಅಹ್ಮದ್ ಅಬೂಬಕರ್ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ. ‘‘ನನ್ನ ಕಣ್ಣೆದುರಲ್ಲಿಯೇ ಹಲವು ಮಂದಿ ಮೃತಪಟ್ಟರು. ಹಲವರು ಗಾಯಗೊಂಡರು ಹಾಗೂ ಉಸಿರಾಡಲೂ ಸಾಧ್ಯವಾಗದೆ ಅಡ್ಡಬಿದ್ದರು. ಪೊಲೀಸರ ಜೊತೆ ಸೇರಿದ ನಾವು ಸಂತ್ರಸ್ತರನ್ನು ಅಲ್ಲಿಂದ ಹೊರತೆಗೆದೆವು’’ ಎಂದು ತನ್ನ ತಾಯಿಯ ಜೊತೆ ಪಾರಾದ ಅಬೂಬಕರ್ ಭಯಾನಕ ದೃಶ್ಯವನ್ನು ವಿವರಿಸಿದ್ದಾರೆ. ಅಲ್ಲಿದ್ದ ಪೊಲೀಸರೂ ಅನನುಭವಿಗಳಾಗಿದ್ದರು. ಅಲ್ಲಿನ ರಸ್ತೆಗಳು ಹಾಗೂ ಸುತ್ತಲಿನ ಪ್ರದೇಶಗಳ ಬಗ್ಗೆಯೂ ಅವರಿಗೆ ಗೊತ್ತಿರಲಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಇದ್ದಿರುವುದರ ಹೊರತಾಗಿಯೂ, ಇವರಿಗೆ ಸಮರ್ಪಕ ತರಬೇತಿಯನ್ನು ನೀಡಿರಲಿಲ್ಲ. ಭಾರೀ ಸಂಖ್ಯೆಯಲ್ಲಿದ್ದ ವಿದೇಶಿ ಯಾತ್ರಿಗಳ ಜೊತೆ ಸಂವಹನ ನಡೆಸುವುದಕ್ಕೆ ಅತಿ ಅಗತ್ಯವಾಗಿ ಬೇಕಾಗಿದ್ದ ಭಾಷೆಯ ಜ್ಞಾನವೇ ಇವರಿಗೆ ಇರಲಿಲ್ಲ ಎಂದು ಇನ್ನೊಬ್ಬರು ಟೀಕಿಸಿದ್ದಾರೆ. ಇಂತಹ ಘಟನೆಗಳು ಇನ್ನು ಮುಂದೆಯೂ ಸಂಭವಿಸಬಹುದು ಎಂದು ಮತ್ತೋರ್ವ ಪ್ರತ್ಯಕ್ಷದರ್ಶಿ 39 ವರ್ಷ ಪ್ರಾಯದ ಈಜಿಪ್ಟ್ ಯಾತ್ರಾರ್ಥಿ ಮುಹಮ್ಮದ್ ಹಸನ್ ಕಳವಳ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಕಾರ್ಯ ಚುರುಕು
ಕಾಲ್ತುಳಿತ ಸಂಭವಿಸಿದ ಸ್ಥಳಕ್ಕೆ ಸೌದಿ ಸರಕಾರವು 220 ಆ್ಯಂಬುಲೆನ್ಸ್ ಗಳು ಹಾಗೂ ನಾಲ್ಕುಸಾವಿರ ಸಿಬ್ಬಂದಿಯನ್ನು ನಿಯೋಜಿಸಿದೆ.ಜನರು ಗುಂಪು ಸೇರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗಾಯಾಳುಗಳಿಗೆ ಚಿಕಿತ್ಸೆ, ಆಹಾರ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ ಎಂದು ಅಲ್ಲಿನ ನಾಗರಿಕ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರಲ್ಲಿ ಇರಾನ್(131), ಮೊರೊಕ್ಕೊ(87), ಭಾರತ(14), ಪಾಕಿಸ್ತಾನ(7), ಇಂಡೋನೇಶ್ಯ( 3), ಕೆನ್ಯಾ (3) ಹಾಗೂ ನೆದರ್‌ಲ್ಯಾಂಡ್ಸ್ (1)ನ ಪ್ರಜೆಗಳು ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ.

ತಾಸಿಗೆ 3 ಲಕ್ಷ ಯಾತ್ರಿಕರಿಂದ ಕಲ್ಲೆಸೆಯುವ ವಿಧಿ
ಸ್ಟ್ರೀಟ್ 204ರಲ್ಲಿರುವ ಜಮರಾತ್ ಸೇತುವೆ ಎಂದು ಕರೆಯಲ್ಪಡುವ ಐದಂತಸ್ತಿನ ರಚನೆಯ ಮೂರು ಬೃಹತ್ ಸ್ತಂಭಗಳಿಗೆ ಕಲ್ಲೆಸೆಯುವ ಸಂಪ್ರದಾಯ ಹಜ್ ಯಾತ್ರೆಯ ಒಂದು ಪ್ರಮುಖ ಘಟ್ಟವಾಗಿದೆ. 100 ಕೋಟಿ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಪುರಾತನ ರಚನೆ ಸುಮಾರು1 ಕಿ.ಮೀ. ಉದ್ದವಿದೆ. ಇಲ್ಲಿ ಗಂಟೆಗೆ ಸುಮಾರು ಮೂರು ಲಕ್ಷ ಯಾತ್ರಾರ್ಥಿಗಳು ಕಲ್ಲೆಸೆಯುವ ವಿಧಿ ನೆರವೇರಿಸುತ್ತಾರೆ.

ದೇವಚಿತ್ತವಲ್ಲ; ಮಾನವ ಕ್ಷಮತೆಯ ಕೊರತೆ
ಮಿನಾ, ಸೆ.25: ಹಜ್ ಯಾತ್ರೆಯ ವೇಳೆ ಮಿನಾದಲ್ಲಿ ಸಂಭವಿಸಿರುವ ಭೀಕರ ಕಾಲ್ತುಳಿತವು ದೈವಚಿತ್ತವಾಗಿರದೆ, ಅದೊಂದು ಮಾನವ ಕ್ಷಮತೆಯಲ್ಲಿನ ಕೊರತೆಯಾಗಿದೆ ಎಂದು ಬಿಬಿಸಿ ವರದಿಗಾರರಾದ ಚಿಮಾ ಇಲ್ಲಾ ಯೂಸುಫ್ ಚಿತ್ರಶೀರ್ಷಿಕೆಯೊಂದರಲ್ಲಿ ಬಣ್ಣಿಸಿದ್ದಾರೆ. ‘‘ಕಾಲ್ತುಳಿತದ ಪರಿಣಾಮ ನಾನು ನನ್ನ ಅತ್ತೆಯನ್ನು ಕಳೆದುಕೊಳ್ಳುವಂತಾಯಿತು’’ ಎಂದವರು ದುಃಖಿಸಿದ್ದಾರೆ.

ಶ್ವೇತಭವನ ಸಂತಾಪ
ವಾಷಿಂಗ್ಟನ್, ಸೆ.25: ಸೌದಿ ಅರೇಬಿಯದ ಮಿನಾದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ವಿವಿಧ ರಾಷ್ಟ್ರಗಳ 700ಕ್ಕೂ ಅಧಿಕ ಮಂದಿ ಬಲಿಯಾದ ಘಟನೆಗೆ ಸಂಬಂಧಿಸಿ ಶ್ವೇತಭವನವು ತೀವ್ರ ಶೋಕ ವ್ಯಕ್ತಪಡಿಸಿದೆ.
‘‘ಸೌದಿ ಅರೇಬಿಯದ ಮಿನಾದಲ್ಲಿ ಸಂಭವಿಸಿದ ದುರಂತದಲ್ಲಿ ಮಡಿದ ನೂರಾರು ಮಂದಿಯ ಕುಟುಂಬಗಳಿಗೆ ಹಾಗೂ ಗಾಯಾಳುಗಳ ಬಗ್ಗೆ ಅಮೆರಿಕವು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಮುಸ್ಲಿಮ್ ಜಗತ್ತು ಈದುಲ್ ಅಝ್‌ಹಾ ಆಚರಿಸುತ್ತಿರುವ ಈ ಸಂದರ್ಭದಲ್ಲಿ ದುರಂತಕ್ಕೆ ಬಲಿಯಾದವರ ಬಗ್ಗೆ ಶೋಕಪಡುವವರಲ್ಲಿ ನಾವೂ ಸೇರಿದ್ದೇವೆ’’ ಎಂದು ಹೇಳಿಕೆಯೊಂದರಲ್ಲಿ ಶ್ವೇತ ಭವನ ತಿಳಿಸಿದೆ.

ಹಜ್: ಹಿಂದಿನ ದುರಂತಗಳು
2006: ಜಮರಾತ್ ಸೇತುವೆಯಲ್ಲಿ ನೂಕುನುಗ್ಗಲಿಗೆ 364 ಮಂದಿ ಬಲಿ
1997: ಮಿನಾ ಟೆಂಟ್ ನಗರದಲ್ಲಿ ಅಪ್ಪಳಿಸಿದ್ದ ಭೀಕರ ಮಾರುತದ ಪರಿಣಾಮ 270 ಮಂದಿ ಬಲಿ
1994: ಕಲ್ಲೆಸೆಯುವ ವಿಧಿ ನೆರವೇರಿಸುವ ವೇಳೆ ಉಂಟಾಗಿದ್ದ ಕಾಲ್ತುಳಿತಕ್ಕೆ 270 ಮಂದಿ ಬಲಿ
1990: ಪವಿತ್ರ ಪ್ರದೇಶಗಳನ್ನು ಸಂಪರ್ಕಿಸುವ ಸುರಂಗದಲ್ಲಿ ಜನಸಂದಣಿಯಿಂದಾಗಿ ಉಂಟಾದ ದುರಂತಕ್ಕೆ 1,426 ಯಾತ್ರಾರ್ಥಿಗಳ ಸಾವು
1987: ಇರಾನ್‌ನ ಯಾತ್ರಾರ್ಥಿಗಳಿಂದ ಅಮೆರಿಕದ ವಿರುದ್ಧ ನಡೆದಿದ್ದ ಪ್ರತಿಭಟನೆಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ನಡೆಸಿದ್ದ ಕಾರ್ಯಾಚರಣೆಗೆ 402 ಮಂದಿ ಬಲಿ.

Write A Comment