ರಾಷ್ಟ್ರೀಯ

ಭೂ ಅತಿಕ್ರಮಣಕ್ಕೆ ಅಸಾರಾಂಗೆ 17 ಕೋಟಿ ರೂ. ದಂಡ

Pinterest LinkedIn Tumblr

asaram__ಸೂರತ್, ಸೆ. 25: ಇಲ್ಲಿನ ಜಹಾಂಗೀರ್‌ಪುರದಲ್ಲಿ ಆಶ್ರಮ ಸ್ಥಾಪಿಸಲು ಸರಕಾರಿ ಜಮೀನನ್ನು ಒತ್ತುವರಿ ಮಾಡಿರುವುದಕ್ಕಾಗಿ ಅಸಾರಾಂ ಬಾಪುಗೆ ಸೂರತ್ ಜಿಲ್ಲಾಧಿಕಾರಿ 17 ಕೋಟಿ ರೂಪಾಯಿ ದಂಡ ವಿಧಿಸಿದ್ದಾರೆ.
1996ರಿಂದ 2010ರವರೆಗೆ ಸರಕಾರಿ ಜಮೀನನ್ನು ಅನುಭವಿಸಿರುವುದಕ್ಕಾಗಿ ಇಷ್ಟು ಬಾಡಿಗೆ ಪಾವತಿಸುವಂತೆ ಸೂಚಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕುಮಾರ್ ಗುರುವಾರ ನೋಟಿಸ್ ಜಾರಿಗೊಳಿಸಿದ್ದಾರೆ.
ಸರಕಾರ 1976ರಲ್ಲಿ ತಾಪಿ ನದಿ ದಂಡೆಯಲ್ಲಿ ತಡೆ ಗೋಡೆ ನಿರ್ಮಿಸಲು 50,000 ಚದರ ಮೀಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಆ ಪೈಕಿ ಜಹಾಂಗೀರ್‌ಪುರದಲ್ಲಿರುವ 34,400 ಚದರ ಮೀಟರ್ ನೀರಾವರಿ ಜಮೀನನ್ನು ಅತಿಕ್ರಮಿಸಿದ ಅಸಾರಾಂನ ಆಶ್ರಮ, ಅಲ್ಲಿ ಒಂದು ದೇವಸ್ಥಾನ, ಮಹಂತರಿಗಾಗಿ ನಿವಾಸಗಳು, ಒಂದು ದನದ ಕೊಟ್ಟಿಗೆ ಮತ್ತು ಒಂದು ಆಯುರ್ವೇದ ಕೇಂದ್ರವನ್ನು ಸ್ಥಾಪಿಸಿತ್ತು.
ಅನಿಲ್ ವ್ಯಾಸ್ ಎಂಬ ರೈತ ಗುಜರಾತ್ ಹೈಕೋರ್ಟ್‌ನಲ್ಲಿ ಈ ಬಗ್ಗೆ ದೂರು ನೀಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಜಮೀನನ್ನು ವಶಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿತ್ತು.
ಈ ವಿಷಯ ಮೊದಲು ಬೆಳಕಿಗೆ ಬಂದದ್ದು ಅಸಾರಾಂ 1996ರಲ್ಲಿ ತನ್ನ ಆಶ್ರಮವನ್ನು ಅಭಿವೃದ್ಧಿಪಡಿಸಲು ಜಹಾಂಗಿರ್‌ಪುರದಲ್ಲಿ ಕೃಷಿ ಭೂಮಿಯನ್ನು ಆಕ್ರಮಿಸಿಕೊಂಡಾಗ. ನೀರು ವಿತರಣಾ ಕೇಂದ್ರವೊಂದನ್ನು ಸ್ಥಾಪಿಸುವುದಕ್ಕಾಗಿ ನಿರ್ದಿಷ್ಟ ಜಾಗವೊಂದನ್ನು ಸೂರತ್ ನಗರ ಪಾಲಿಕೆ ಮೀಸಲಿಟ್ಟಿತ್ತು.
2008 ಆಗಸ್ಟ್ 28ರಂದು ಗುಜರಾತ್ ಹೈಕೋರ್ಟ್ ಆಶ್ರಮವನ್ನು ಸಕ್ರಮಗೊಳಿಸುವಂತೆ ರಾಜ್ಯ ಸರಕಾರಕ್ಕೆ ಆದೇಶ ನೀಡಿದ ಸಂದರ್ಭದಲ್ಲಿ ಈ ವಿಷಯ ಮತ್ತೆ ಮುನ್ನೆಲೆಗೆ ಬಂತು. ಜಮೀನಿನ ಬೆಲೆ, ಸಕ್ರಮ ಶುಲ್ಕ ಮತ್ತು ಭೂ ಅತಿಕ್ರಮಣಕ್ಕೆ ದಂಡವಾಗಿ 18.57 ಕೋಟಿ ರೂಪಾಯಿ ಪಾವತಿಸುವಂತೆ ಆಶ್ರಮದ ಅಧಿಕಾರಿಗಳಿಗೆ ನ್ಯಾಯಾಲಯ ಆದೇಶ ನೀಡಿತ್ತು. ಆಶ್ರಮ ಕೇವಲ 30.30 ಲಕ್ಷ ರೂಪಾಯಿ ಪಾವತಿಸಿತ್ತು.

Write A Comment