ಮುಂಬೈ

ಯಾವತ್ತೂ ಕ್ಷಮಾದಾನ ಕೋರಿಲ್ಲ: ಸಂಜಯ್ ದತ್

Pinterest LinkedIn Tumblr

Sanjay-Dutt-700ಮುಂಬೈ, ಸೆ.25: ಕ್ಷಮಾದಾನ ನೀಡುವಂತೆ ಕೋರಿ ತಾನು ಮಹಾರಾಷ್ಟ್ರ ರಾಜ್ಯಪಾಲರಿಗೆ ಯಾವತ್ತೂ ಮನವಿ ಸಲ್ಲಿಸಿಲ್ಲ ಅಥವಾ ತನ್ನ ಪರವಾಗಿ ಕ್ಷಮಾದಾನ ಕೋರುವಂತೆ ಯಾರನ್ನೂ ವಿನಂತಿಸಿಲ್ಲ ಎಂದು ಬಾಲಿವುಡ್ ನಟ ಸಂಜಯ್ ದತ್ ಇಂದು ಹೇಳಿದ್ದಾರೆ.
ಅವರು ಪ್ರಸಕ್ತ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಕ್ಷಮಾದಾನ ನೀಡುವಂತೆ ಕೋರಿ ಸಂಜಯ್ ದತ್ ಸಲ್ಲಿಸಿರುವ ಅರ್ಜಿಯನ್ನು ಮಹಾರಾಷ್ಟ್ರ ರಾಜ್ಯಪಾಲರು ತಳ್ಳಿ ಹಾಕಿದ್ದಾರೆ ಎಂಬುದಾಗಿ ಇತ್ತೀಚೆಗೆ ಪ್ರಕಟವಾದ ವರದಿಗಳಿಗೆ ಸಂಬಂಧಿಸಿ ಅವರ ವಕೀಲರಾದ ಹಿತೇಶ್ ಜೈನ್ ಮತ್ತು ಸುಭಾಶ್ ಜಾಧವ್ ಪತ್ರಿಕಾ ಹೇಳಿಕೆಯೊಂದರಲ್ಲಿ ಈ ರೀತಿಯ ಸ್ಪಷ್ಟನೆ ನೀಡಿದ್ದಾರೆ. ಸಂಜಯ್ ದತ್ ಮತ್ತು ಪ್ರಕರಣದ ಇತರ ದೋಷಿಗಳಿಗೆ ಕ್ಷಮಾದಾನ ಕೋರಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ಸಲ್ಲಿಸಿದ ಅರ್ಜಿಯ ಬಗ್ಗೆ ರಾಜ್ಯಪಾಲರು ಆ ಕ್ರಮ ತೆಗೆದುಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
‘‘ಕ್ಷಮಾದಾನ ಕೋರಿ ಸಂಜಯ್ ದತ್ ಆಗಲಿ ಅವರ ಕುಟುಂಬ ಸದಸ್ಯರಾಗಲಿ ರಾಜ್ಯಪಾಲರಿಗೆ ಯಾವತ್ತೂ ಮನವಿ ಸಲ್ಲಿಸಿಲ್ಲ. ಅದೂ ಅಲ್ಲದೆ, ಸಂಜಯ್ ದತ್ ಆಗಲಿ ಅವರ ಕುಟುಂಬ ಸದಸ್ಯರಾಗಲಿ ದತ್ ಪರವಾಗಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸುವಂತೆ ಮಾರ್ಕಂಡೇಯ ಕಟ್ಜುರನ್ನು ಯಾವತ್ತೂ ಕೋರಿಲ್ಲ’’ ಎಂದು ಹೇಳಿಕೆ ತಿಳಿಸಿದೆ.
‘‘ನ್ಯಾಯಮೂರ್ತಿ ಕಟ್ಜು ಸ್ವಯಂಪ್ರೇರಿತವಾಗಿ ದತ್‌ಗೆ ಕ್ಷಮಾದಾನ ಕೋರಿ ಮನವಿ ಸಲ್ಲಿಸಿದ್ದರು. ದತ್‌ಗೆ ಮಾತ್ರವಲ್ಲ, ಝೈಬುನ್ನೀಸಾ ಖಾಝಿ ಸೇರಿದಂತೆ ಇತರ ದೋಷಿಗಳಿಗೂ ಕ್ಷಮಾದಾನ ನೀಡಬೇಕೆಂದು ಅವರು ಕೋರಿದ್ದರು’’ ಎಂದಿದೆ.
ದತ್ ‘‘ಭಯೋತ್ಪಾದಕನಲ್ಲ’’, ಹಾಗೂ ಅವರು ಕೇವಲ ‘‘ತಪ್ಪು ಮಾಡಿದ್ದಾರೆ’’ ಎಂಬ ನೆಲೆಯಲ್ಲಿ ಅವರಿಗೆ ಕ್ಷಮಾದಾನ ನೀಡಬೇಕು ಎಂದು ಕೋರಿ ನ್ಯಾ. ಕಟ್ಜು ಮಹಾರಾಷ್ಟ್ರ ರಾಜ್ಯಪಾಲ ವಿದ್ಯಾಸಾಗರ ರಾವ್‌ಗೆ ಮನವಿ ಸಲ್ಲಿಸಿದ್ದರು.
2013 ಮೇ ತಿಂಗಳಿನಿಂದ ಅವರು ಪುಣೆಯ ಯರವಾಡ ಸೆರೆಮನೆಯಲ್ಲಿದ್ದಾರೆ. ಈಗಾಗಲೇ ಸುಮಾರು 30 ತಿಂಗಳುಗಳನ್ನು ಜೈಲಿನಲ್ಲಿ ಕಳೆದಿರುವ ಅವರು 2016ರ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದ್ದಾರೆ.

Write A Comment