ಮನೋರಂಜನೆ

ನೀನೇ ಬರಿ ನೀನೆ ಚಿತ್ರ: ಹಾಡು ಸವಿಯುವ ಸಮಯ

Pinterest LinkedIn Tumblr

pvec19915film-2 –ಆನಂದತೀರ್ಥ ಪ್ಯಾಟಿ
ಚಿತ್ರ:
ನೀನೇ ಬರಿ ನೀನೆ
ತಾರಾಗಣ:
ಅನೀಶ್, ದೀಪಿಕಾ ಕಾಮಯ್ಯ, ಸಂಯುಕ್ತಾ ಹೊರನಾಡು, ವಿ.ಮನೋಹರ್, ಆಶಾರಾಣಿ, ಲಕ್ಷ್ಮೀದೇವಮ್ಮ, ಅಶ್ವಿನಿ, ಧರ್ಮ
ನಿರ್ದೇಶನ:
ದೀಪಕ್ ತಿಮ್ಮಯ
ನಿರ್ಮಾಪಕರು:
ಅಶೋಕ್‌ ಖೇಣಿ

‘ಕೆಟ್ಟು ಪಟ್ಟಣ ಸೇರು’ ಎಂಬುದೊಂದು ಹಳೆಯ ಗಾದೆ. ಆದರೆ ‘ಕೆಟ್ಟು ಪಟ್ಟಣ ಸೇರಿದ ಬಳಿಕ ಒಳ್ಳೆಯವನಾಗಿ ಹಳ್ಳಿಗೆ ಬಾ’ ಎಂಬ ಹೊಸ ಗಾದೆಯನ್ನು ‘ನೀನೇ ಬರಿ ನೀನೆ’ ಚಿತ್ರದ ಮೂಲಕ ಸೃಷ್ಟಿಸಲಾಗಿದೆ. ಹಳ್ಳಿಯಲ್ಲಿದ್ದು ಏನೂ ಸಾಧಿಸದೇ ಪ್ರೇಮಿಯೂ ತನ್ನ ಕೈಹಿಡಿಯದಂಥ ಸ್ಥಿತಿ ಉಂಟಾದಾಗ, ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳುವ ಹಳ್ಳಿ ಹುಡುಗನ ಕಥೆಯಿದು.

ರುಕ್ಮಿಣಿ ಮೇಲೆ ಕೃಷ್ಣನಿಗೆ ಪ್ರೀತಿಯೇನೂ ಇರುವುದಿಲ್ಲ. ಸುಮ್ಮನೇ ಆಕೆಯನ್ನು ಭೇಟಿಯಾಗಿ ಬರುವ ಕೃಷ್ಣನಿಗೆ ಖಳನಾಯಕ ರಘು ಎದುರಾಗುತ್ತಾನೆ. ಆತನಿಗೋ ರುಕ್ಮಿಣಿಯನ್ನು ಮದುವೆಯಾಗುವ ಪ್ರಬಲ ಆಕಾಂಕ್ಷೆ. ವಾದ ವಿವಾದದ ಮಧ್ಯೆ ‘ರುಕ್ಮಿಣಿ ತಾನಾಗಿಯೇ ನನ್ನ ಬಳಿ ಬರುವಂತೆ ಮಾಡುತ್ತೇನೆ’ ಎಂದು ಕೃಷ್ಣ ಸವಾಲು ಹಾಕಿಬಿಡುತ್ತಾನೆ. ಸರಿ… ಅಲ್ಲಿಂದ ಶುರು ಆತನ ಪರದಾಟ.

ಸಂಗೀತದ ಮೇಲೆ ರುಕ್ಮಿಣಿಗೆ ಮೋಹ ಎಂದು ತಿಳಿದ ಕೃಷ್ಣ, ಅದಕ್ಕಾಗಿ ಬೆಂಗಳೂರಿಗೆ ಬಂದು ಸಂಗೀತ ಕಲಿಯುವುದು, ಬಳಿಕ ಸೂಪರ್‌ಸ್ಟಾರ್‌ ಆಗುವುದು, ಆತ ಹೇಳಿದಂತೆಯೇ ರುಕ್ಮಿಣಿ ಖುದ್ದಾಗಿ ಆತನೆಡೆ ಬರುವುದು ಇತ್ಯಾದಿ ಇತ್ಯಾದಿ ನಿರೀಕ್ಷಿತ ಕಥೆ ಇಲ್ಲಿದೆ. ಎರಡು ಸಮಾನಾಂತರ ಪ್ರೇಮಕಥೆಗಳನ್ನು ಹೇಳಲು ನಿರ್ದೇಶಕ ದೀಪಕ್ ತಿಮ್ಮಯ ಮುಂದಾಗಿದ್ದಾರೆ. ಈ ಕಥೆಯ ವಿಸ್ತಾರಕ್ಕೆ ತಕ್ಕಂತೆ ನಿರೂಪಣೆಯಲ್ಲಿ ಲವಲವಿಕೆ ಇನ್ನಷ್ಟು ಇರಬೇಕಿತ್ತು. ಹಾಗೆಯೇ ಪ್ರೇಕ್ಷಕನನ್ನು ಕಾಡುವ ಸನ್ನಿವೇಶಗಳು ಹೆಚ್ಚಾಗಿ ಇರಬೇಕಿತ್ತು.

ಜಯಂತ ಕಾಯ್ಕಿಣಿ ಅವರ ಸಾಹಿತ್ಯಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದು, ಆ ಹಾಡುಗಳು ಸಿನಿಮಾವನ್ನು ಸಹನೀಯಗೊಳಿಸುವಂತಿವೆ. ಅನಂತ್ ಅರಸ್ ಛಾಯಾಗ್ರಹಣ ಮಲೆನಾಡಿನ ಚೆಂದದ ತಾಣಗಳನ್ನು ಸೆರೆಹಿಡಿದಿದೆ. ಅನೀಶ್‌ ಹಾಗೂ ದೀಪಿಕಾ ಕಾಮಯ್ಯ ಉತ್ಸಾಹದಿಂದ ನಟಿಸಿದ್ದರೂ ಸಂಯುಕ್ತಾ ಹೊರನಾಡು ಹೆಚ್ಚು ಗಮನಸೆಳೆಯುತ್ತಾರೆ.

ಮನೋಹರ್ ನಿರ್ವಹಿಸಿರುವ ಚಿಕ್ಕ ಪಾತ್ರವೂ ಗಮನದಲ್ಲಿ ಉಳಿಯುತ್ತದೆ. ಕೆಲವು ವರ್ಷಗಳ ಹಿಂದೆ, ಮನೋಮೂರ್ತಿ ಸಂಗೀತದಲ್ಲಿ ಜಯಂತ ಕಾಯ್ಕಿಣಿ ಹಾಡುಗಳ ಅಲ್ಬಂ ‘ನೀನೇ ಬರಿ ನೀನೆ’ ಹೊರಬಂದು ಜನಪ್ರಿಯವಾಗಿತ್ತು. ಆ ಹಾಡುಗಳಿಗೆ ಹೊಂದುವಂಥ ಕಥೆಯನ್ನು ಬರೆದು, ದೀಪಕ್ ತಿಮ್ಮಯ ನಿರ್ದೇಶಿಸಿದ ಸಿನಿಮಾ ಇದು. ಚಿತ್ರದ ಹಾಡುಗಳೇನೋ ಮತ್ತೊಮ್ಮೆ ಮಗದೊಮ್ಮೆ ಕೇಳುವಷ್ಟು ಮಧುರವಾಗಿವೆ. ಸಿನಿಮಾ ನೋಡಿದ ಬಳಿಕವೂ ಹಾಡುಗಳು ನೆನಪಿನಲ್ಲಿ ಉಳಿಯುತ್ತವೆ.

Write A Comment