ರಾಷ್ಟ್ರೀಯ

ಮಹಾರಾಷ್ಟ್ರ: ಮುಸ್ಲಿಮರಿಗೆ ವಿದ್ಯಾರ್ಥಿ ವೇತನಕ್ಕಾಗಿ ಖಾತೆ ತೆರೆಯಲು ಬ್ಯಾಂಕುಗಳ ನಕಾರ

Pinterest LinkedIn Tumblr

rbs--621x414ಔರಂಗಾಬಾದ್,ಸೆ.12: ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗಾಗಿರುವ ವಿವಿಧ ವಿದ್ಯಾಥಿ ವೇತನಗಳನ್ನು ಪಡೆಯಲು ಅಗತ್ಯವಾಗಿರುವ ಶೂನ್ಯ ಠೇವಣಿಯ ಬ್ಯಾಂಕ್ ಖಾತೆಗಳನ್ನು ತೆರೆಯಲು ಮಹಾರಾಷ್ಟ್ರದ ಮುಸ್ಲಿಂ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.

ಸರಕಾರವು ಈ ವಿದ್ಯಾರ್ಥಿ ವೇತನಗಳ ಮೊತ್ತವನ್ನು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡುತ್ತದೆ. ಹೀಗಾಗಿ ವಿದ್ಯಾರ್ಥಿ ವೇತನದ ಅರ್ಜಿಗಳನ್ನು ತುಂಬುವಾಗ ಪ್ರತಿ ವಿದ್ಯಾರ್ಥಿಯೂ ತನ್ನ ಬ್ಯಾಂಕ್ ಖಾತೆಯ ವಿವರಗಳನ್ನು ಒದಗಿಸಬೇಕಾಗುತ್ತದೆ.

ಶೂನ್ಯ ಶಿಲ್ಕಿನ ಬ್ಯಾಂಕ್ ಖಾತೆಗಳನ್ನು ತೆರೆಯಲು ಸಾಧ್ಯವಾಗದೆ ನಿಗದಿತ ಗಡುವಿನಲ್ಲಿ ವಿದ್ಯಾರ್ಥಿ ವೇತನ ಅರ್ಜಿಗಳನ್ನು ಸಲ್ಲಿಸಲು ಮುಸ್ಲಿಂ ವಿದ್ಯಾರ್ಥಿಗಳು ವಿಫಲರಾಗಬಹುದು. ಹೀಗಾಗಿ ತಕ್ಷಣವೇ ಮಧ್ಯೆ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ಮರಾಠವಾಡಾದ ಎನ್‌ಜಿಒ ಆಜಾದ್ ಯುವ ಬ್ರಿಗೇಡ್ ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ.

ವಿದ್ಯಾರ್ಥಿಗಳು ಶೂನ್ಯ ಶಿಲ್ಕಿನ ಖಾತೆಗಳನ್ನು ತೆರೆಯಲು ಬ್ಯಾಂಕುಗಳು ಅವಕಾಶ ನೀಡುತ್ತಿಲ್ಲ. 1,000ರೂ.ಠೇವಣಿಯೊಂದಿಗೆ ಖಾತೆಗಳನ್ನು ತೆರೆಯುವಂತೆ ಅವು ಸೂಚಿಸುತ್ತಿವೆ. ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಗಳನ್ನು ಪಡೆಯಲು ಅನುಕೂಲವಾಗುವಂತೆ ಅವರಿಗಾಗಿ ಶೂನ್ಯ ಶಿಲ್ಕಿನ ಖಾತೆಗಳನ್ನು ತೆರೆಯುವಂತೆ ಆರ್‌ಬಿಐ 2010ರಲ್ಲಿಯೇ ಸುತ್ತೋಲೆಯನ್ನು ಹೊರಡಿಸಿದೆ. ಆದರೆ ಬ್ಯಾಂಕುಗಳು ಇದನ್ನು ಅನುಸರಿಸುತ್ತಿಲ್ಲ ಮತ್ತು ವಿದ್ಯಾರ್ಥಿಗಳ ಪಾಲಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ ಎಂದು ಬ್ರಿಗೇಡ್‌ನ ಉಪಾಧ್ಯಕ್ಷ ವಸೀಂ ಸಿದ್ದಿಕಿ ಸುದ್ದಿಸಂಸ್ಥೆಗೆ ತಿಳಿಸಿದರು.

ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಸಲ್ಲಿಸಲು ಸೆ.16 ಕೊನೆಯ ದಿನಾಂಕವಾಗಿದೆ. ಶೂನ್ಯ ಶಿಲ್ಕಿನ ಖಾತೆಗಳನ್ನು ತೆರೆಯಲು ವಿದ್ಯಾರ್ಥಿಗಳು ಬ್ಯಾಂಕುಗಳಿಗೆ ತೆರಳಿದಾಗ ನಿಗದಿತ ನಮೂನೆಯನ್ನು ತಮ್ಮ ವಾರ್ಡ್‌ಗಳಲ್ಲಿಯ ಬ್ಯಾಂಕ್ ಖಾತೆಗಳಲ್ಲಿಯೇ ತುಂಬಲು ಅವರಿಗೆ ಸೂಚಿಸಲಾಗುತ್ತದೆ. ಜನಧನ್ ಯೋಜನೆಯಡಿ ಖಾತೆಗಳನ್ನು ತೆರೆಯಲು ವಿದ್ಯಾರ್ಥಿಗಳು ತಮ್ಮ ಪರಿಸರದ ಬ್ಯಾಂಕುಗಳಿಗೆ ತೆರಳಿದರೆ ಇಂತಹ ಬ್ಯಾಂಕ್ ಖಾತೆಗಳನ್ನು ಆರಂಭಿಸುವ ಕೋಟಾ ಮುಗಿದಿದೆ ಎಂದು ಹೇಳಿ ಅವರನ್ನು ಸಾಗಹಾಕಲಾಗುತ್ತಿದೆ ಎಂದು ಸಿದ್ದಿಕಿ ಆರೋಪಿಸಿದರು.

Write A Comment