ರಾಷ್ಟ್ರೀಯ

ಬೀಫ್ ನಿಷೇಧ: ಪ್ರತಿಭಟನೆ ದಮನಕ್ಕೆ ಶ್ರೀನಗರದಲ್ಲಿ ಕರ್ಫ್ಯೂ

Pinterest LinkedIn Tumblr

srinagarಶ್ರೀನಗರ, ಸೆ. 12: ಜಮ್ಮು ಮತ್ತು ಕಾಶ್ಮೀರದಲ್ಲಿ ಬೀಫ್ ಮಾರಾಟದ ಮೇಲೆ ವಿಧಿಸಲಾಗಿರುವ ನಿಷೇಧದ ವಿರುದ್ಧ ನಾಗರಿಕರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗಳನ್ನು ತಡೆಯುವ ಯತ್ನವಾಗಿ ಶ್ರೀನಗರದಲ್ಲಿ ಕರ್ಫ್ಯೂ ಮಾದರಿಯ ನಿರ್ಬಂಧಗಳನ್ನು ವಿಧಿಸಲಾಗಿದೆ.
ಕಣಿವೆಯಾದ್ಯಂತ ಅಂಗಡಿಗಳು, ಉದ್ಯಮಗಳು ಮತ್ತು ಶಾಲೆಗಳನ್ನು ಮುಚ್ಚಲಾಗಿದೆ. ಕಾಶ್ಮೀರ ವಿಶ್ವವಿದ್ಯಾನಿಲಯವು ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿದೆ.
ಏಳು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಕರ್ಫ್ಯೂವನ್ನು ಹೋಲುವ ನಿರ್ಬಂಧಗಳನ್ನು ಹೇರಲಾಗಿದೆ. ಶುಕ್ರವಾರ ಮಧ್ಯಾಹ್ನ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಹಿಂಸಾಚಾರ ಸಂಭವಿಸಬಹುದು ಎಂಬ ಭೀತಿಯಲ್ಲಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದರು. ಶುಕ್ರವಾರದ ಪ್ರತಿಭಟನೆಯ ವೇಳೆ ಪ್ರತಿಭಟನಕಾರರು ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಪ್ರಾಣಿವಧೆ ನಡೆಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಆಕಳುಗಳ ವಧೆ, ಬೀಫ್ ಮಾರಾಟ ಮತ್ತು ಖರೀದಿಯ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಜಾರಿಗೆ ತರಬೇಕು ಎಂದು ರಾಜ್ಯದ ಹೈಕೋರ್ಟ್ ಬುಧವಾರ ಆದೇಶ ನೀಡಿತ್ತು. ಬೀಫ್ ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿತ್ತು.
ಈ ವಿಷಯದಲ್ಲಿ ರಾಜ್ಯದ ಮೈತ್ರಿ ಸರಕಾರದ ಪಾಲುದಾರರಾದ ಪಿಡಿಪಿ ಮತ್ತು ಬಿಜೆಪಿಗಳು ಭಿನ್ನ ನಿಲುವುಗಳನ್ನು ಹೊಂದಿರುವುದರಿಂದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯುತ್ತಿಲ್ಲ ಎಂಬುದಾಗಿ ರಾಜ್ಯದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಕುತೂಹಲದ ವಿಚಾರವೆಂದರೆ, ಈ ಅರ್ಜಿಯನ್ನು ದಾಖಲಿಸಿದ ವಕೀಲ ಪರ್ಮಿಕೋಶ್ ಸೇಠ್‌ರನ್ನು ಸರಕಾರವು ಆರು ತಿಂಗಳ ಹಿಂದೆ ಉಪ ಅಡ್ವೊಕೇಟ್ ಜನರಲ್ ಆಗಿ ನೇಮಿಸಿದೆ.
ಅವರು ಕಳೆದ ವರ್ಷ ಈ ಅರ್ಜಿಯನ್ನು ಸಲ್ಲಿಸಿದ್ದರು ಹಾಗೂ ಸರಕಾರಿ ವಕೀಲರಾಗಿ ನೇಮಕಗೊಂಡ ಬಳಿಕವೂ ತನ್ನ ಅರ್ಜಿಯನ್ನು ಮುಂದುವರಿಸಿದರು.
1932ರಲ್ಲಿ ಪ್ರಾಂತೀಯ ರಾಜರ ಆಳ್ವಿಕೆಯ ಸಮಯದಲ್ಲಿ ರೂಪಿಸಲಾದ ಕಾನೂನಿನ ಪ್ರಕಾರ ದನ, ಎತ್ತು, ಎಮ್ಮೆ, ಕೋಣ ಸೇರಿದಂತೆ ಆಕಳುಗಳ ಹತ್ಯೆ ಶಿಕ್ಷಾರ್ಹ ಅಪರಾಧ ಹಾಗೂ ಉಲ್ಲಂಘಕರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆದರೆ, ಈ ಕಾನೂನನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು ವಿರಳ.

Write A Comment