ರಾಷ್ಟ್ರೀಯ

ಭಾರತದಲ್ಲಿ ರಕ್ತದೊತ್ತಡ-ಡಯಾಬಿಟಿಸ್-ಧೂಮಪಾನ: ಅತಿದೊಡ್ಡ ಕೊಲೆಕಡುಕರು! ಲಾನ್ಸೆಟ್ ಅಧ್ಯಯನ ವರದಿ

Pinterest LinkedIn Tumblr

smokeಹೊಸದಿಲ್ಲಿ, ಸೆ.12: ರಕ್ತದ ಏರೊತ್ತಡ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ತೀವ್ರ ಹೆಚ್ಚಳ, ಧೂಮಪಾನ ಹಾಗೂ ಮಾಲಿನ್ಯಗಳು ಭಾರತದಲ್ಲಿ, ಅಪೌಷ್ಟಿಕತೆ ಹಾಗೂ ಇತರ ಉಷ್ಣವಲಯದ ಕಾಯಿಲೆಗಳಿಗಿಂತಲೂ ಹೆಚ್ಚು ಜನರನ್ನು ಕೊಲ್ಲುತ್ತಿವೆಯೆಂದು ಲ್ಯಾನ್ಸೆಟ್ ನಡೆಸಿರುವ ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಈ ಆರೋಗ್ಯಕ್ಕೆ ಪೂರಕವಾದ ಅಂಶಗಳೊಂದಿಗೆ ಸಂಬಂಧ ಹೊಂದಿರುವ ಕಾಯಿಲೆಗಳಿಂದಾಗಿ ಸಾಯುವವರ ಸಂಖ್ಯೆಯು ಕಳೆದ ದಶಮಾನದಿಂದೀಚೆ ಗಮನಾರ್ಹವಾಗಿ ಏರಿರುವುದನ್ನು ಅದು ಗಮನಿಸಿದೆ.
1990 ಹಾಗೂ 2013ರ ನಡುವೆ, ರಕ್ತದ ಏರೊತ್ತಡ ಹಾಗೂ ಕೊಲೆಸ್ಟ್ರಾಲ್‌ನಿಂದ ಭಾರತದಲ್ಲಿ ಸಾವಿನ ಪ್ರಮಾಣ ದುಪ್ಪಟ್ಟಿಗಿಂತಲೂ ಹೆಚ್ಚಾಗಿವೆ. ಅದೇ ವೇಳೆ, ಹೊರಾಂಗಣ ಮಾಲಿನ್ಯದಿಂದ ಸಂಭವಿಸಿದ ಸಾವುಗಳು ಈ ಅವಧಿಯಲ್ಲಿ ಶೇ. 60ಕ್ಕಿಂತಲೂ ಹೆಚ್ಚಾಗಿವೆ. ಆಲ್ಕೊಹಾಲ್‌ನಿಂದಾದ ಸಾವುಗಳ ಪ್ರಮಾಣ ಶೇ. 97ರಷ್ಟು ಏರಿವೆಯೆಂದು 79 ಅಪಾಯಕಾರಿ ಅಂಶಗಳ ವಿಶ್ಲೇಷಣೆಯಿಂದ ಸಂಗ್ರಹಿಸಿದ ಮಾಹಿತಿ ತೋರಿಸಿದೆ.
ಜಾಗತಿಕ ಕಾಯಿಲೆಗಳ ಹೊರೆಯನ್ನು ಅಂದಾಜಿಸುವ ಈ ಅಧ್ಯಯನವನ್ನು ಯುನಿವರ್ಸಿಟಿ ಆಫ್ ವಾಶಿಂಗ್ಟನ್ ನೇತೃತ್ವದ ಸಂಶೋಧಕರ ಅಂತಾರಾಷ್ಟ್ರೀಯ ಸಂಘವೊಂದು ನಡೆಸಿದ್ದು, ಅದರಲ್ಲಿ ಭಾರತದ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ (ಪಿಎಚ್‌ಎಫ್‌ಐ) ಪ್ರತಿನಿಧಿಗಳು ಸೇರಿದ್ದರು.
1990ರಲ್ಲಿ, ಬಾಲ್ಯಾವಸ್ಥೆಯ ಅಪೌಷ್ಟಿಕತೆ ಅತ್ಯಂತ ದೊಡ್ಡ ಆರೋಗ್ಯಾಪಾಯವಾಗಿದ್ದು, ಭಾರತದಲ್ಲಿ ಸುಮಾರು 8.97 ಲಕ್ಷ ಸಾವುಗಳಿಗೆ ಕಾರಣವಾಗಿತ್ತು. ಆದರೆ, ಅದೀಗ ದೇಶದ ಅಗ್ರ 10 ಆರೋಗ್ಯಕ್ಕೆ ಅಪಾಯಕಾರಿಗಳಾದ ಅಂಶಗಳ ಪಟ್ಟಿಯಲಿಲ್ಲವೆಂದು ಅಧ್ಯಯನ ತಿಳಿಸಿದೆ. ಅದಕ್ಕೆ ಬದಲಾಗಿ, 1991ರಲ್ಲಿ 76ಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾದ ರಕ್ತದ ಏರೊತ್ತಡವು, 2013ರಲ್ಲಿ ಸಾವುಗಳ ಪ್ರಮಾಣ ಶೇ. 106ರಷ್ಟು ಏರುವುದರೊಂದಿಗೆ, ಆರೋಗ್ಯಕ್ಕೆ ಅತ್ಯಂತ ಗಂಭೀರ ಬೆದರಿಕೆಯೆನಿಸಿದೆ.
ಅಧ್ಯಯನದ ಪ್ರಕಾರ, ರಕ್ತದ ಏರೊತ್ತಡ, ತೀವ್ರ ಮಧುಮೇಹ ಹಾಗೂ ಒಳಾಂಗಣ ಮಾಲಿನ್ಯಗಳು ಒಟ್ಟಾಗಿ, 2013ರಲ್ಲಿ 33ಲಕ್ಷ ಅವಧಿ ಪೂರ್ಣ ಸಾವುಗಳಿಗೆ ಕಾರಣವಾಗಿವೆ.
ಅಸುರಕ್ಷಿತ ಜಲ ಮೂಲಗಳು ಹಾಗೂ ತಂಬಾಕು ಸೇವನೆ ಭಾರತದಲ್ಲಿ ಆರೋಗ್ಯ ನಷ್ಟಕ್ಕೆ ಇತರ ದೊಡ್ಡ ಕೊಡುಗೆದಾರರಾಗಿವೆ.
1990ರಿಂದೀಚೆಗೆ, ಮಕ್ಕಳು ಹಾಗೂ ತಾಯಂದಿರ ಅಪೌಷ್ಟಿಕತೆಯು ಆರೋಗ್ಯ ನಷ್ಟಕ್ಕೆ ನೀಡುವ ಕೊಡುಗೆಯು ಗಮನಾರ್ಹವಾಗಿ ಕಡಿಮೆಯಾಗಿದ್ದರೂ, ಇವು ಭಾರತದಲ್ಲಿ ಆರೋಗ್ಯ ನಷ್ಟಕ್ಕೆ ಈಗಲೂ ಪ್ರಬಲ ಕೊಡುಗೆದಾರರಾಗಿವೆಯೆಂದು ಅಧ್ಯಯನ ತಿಳಿಸಿದೆ.ರಕ್ತದ ಏರೊತ್ತಡ, ರಕ್ತದ ಸಕ್ಕರೆ ಹಾಗೂ ಕೊಲೆಸ್ಟ್ರಾಲ್ ಮತ್ತು ಕುಪಥ್ಯ ಹಾಗೂ ಆಲ್ಕೊಹಾಲ್ ಸೇವನೆಗಳಂತಹ ಜೈವಿಕ ಅಪಾಯಾಂಶಗಳಿಂದಾಗುವ ಆರೋಗ್ಯ ನಷ್ಟದ ಪ್ರಮಾಣವು ಕಳೆದ 25 ವರ್ಷಗಳಲ್ಲಿ ದುಪ್ಪಟ್ಟಾಗಿರುವುದು ಉಲ್ಲೇಖನೀಯವಾಗಿದೆಯೆಂದು ಅಧ್ಯಯನದ ಸಹ-ಲೇಖನ, ಪಿಎಚ್‌ಎಫ್‌ಐಯ ಪ್ರೊಫೆಸರ್ ಲಲಿತ್ ದಂಡೋಸಾ ಹೇಳಿದ್ದಾರೆ. ಭಾರತದಲ್ಲಿ ಆರೋಗ್ಯ ಸುಧಾರಣೆಗೆ ಎಲ್ಲ್ಲಿ ನೀತಿಯ ಒತ್ತು ಅಗತ್ಯವೆಂಬುದು ಈ ಅಧ್ಯಯನವು ಉಪಯುಕ್ತ ಸೂಚಿಗಳನ್ನು ಒದಗಿಸುತ್ತದೆಂಬುದು ಪರಿಣತರ ಅಭಿಪ್ರಾಯವಾಗಿದೆ.

Write A Comment