ಬೆಂಗಳೂರು, ಸೆ.9: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಮೇಯರ್ ಆಯ್ಕೆಗೆ 48 ಗಂಟೆ ಬಾಕಿ ಉಳಿದಿರುವಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲಿ ತಳಮಳ ಆರಂಭವಾಗಿದೆ.ಒಂದೆಡೆ ತಳಮಳ, ಮತ್ತೊಂದೆಡೆ ಕಳವಳ ಹೀಗಾಗಿ ಮೇಯರ್ ಚುನಾವಣೆ ಪಕ್ಷಗಳ ಹಿರಿಯ ನಾಯಕರ ನಿದ್ದೆಗೆಡಿಸಿದೆ.
ಮೇಯರ್ ಹುದ್ದೆಗಾಗಿ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಹಾಗು ಜೆಡಿಎಸ್ ಕಾರ್ಪೊರೇಟರ್‍ಗಳನ್ನು ಹಿಡಿದಿಟ್ಟುಕೊಂಡಿರುವ ಈ ಪಕ್ಷಗಳ ಮುಖಂಡರು ಚುನಾವಣೆಯಲ್ಲಿ ನಿರ್ವಹಿಸಬೇಕಾದ ಪಾತ್ರ, ಒಗ್ಗಟ್ಟಿನ ಮಂತ್ರ,ಸೇರಿದಂತೆ ಹಲವು ವಿಷಯಗಳ ಕುರಿತು ನೀತಿ ಪಾಠ ಬೋದಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಫಲಗೊಳಿಸಿ ಶತಾಯಗತಾಯ ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಬಿಜೆಪಿ ಇಂದೂ ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸಿದೆ.
ಹೇಗಾದರೂ ಮಾಡಿ ಜೆಡಿಎಸ್,ಕಾಂಗ್ರೆಸ್ ಇಲ್ಲವೇ ಪಕ್ಷೇತರನ್ನು ಸೆಳೆದು ಕೊನೆ ಗಳಿಗೆಯಲ್ಲಿ ಪಾಲಿಕೆಯಲ್ಲಿ ಕೇಸರಿ ಬಾವುಟ ಹಾರಿಸಲಿ ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ.ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು ಎನ್ನುವ ಜಿದ್ದಿಗೆ ಬಿದ್ದಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ತನ್ನ ಪಕ್ಷಗಳ ಸದಸ್ಯರನ್ನು ಒಟ್ಟುಗೂಡಿಸಿಕೊಂಡು ಅಧಿಕಾರ ಹಿಡಿದೇ ತೀರಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ.
ತನ್ನ ಪಕ್ಷದ ಪಾಲಿಕೆ ಸದಸ್ಯರನ್ನು ಒಟ್ಟುಗೂಡಿಸಿಕೊಂಡು ಮಡಿಕೇರಿಯ ವಿವಿಧ ರೆಸಾರ್ಟ್‍ನಲ್ಲಿ ಹಿಡಿದಿಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದ್ದರೆ ಇತ್ತ ಜೆಡಿಎಸ್‍ನ ಪಾಲಿಕೆ ಸದಸ್ಯರು ಕೇರಳ ಸೇರಿದಂತೆ ವಿವಿದೆಡೆ ಪ್ರವಾಸದಲ್ಲಿ ನಿರತಾರಾಗಿದ್ದಾರೆ.ಇವರ ಜೊತೆಗೆ ಪಕ್ಷೇತರ ಸದಸ್ಯರೂ ಸೇರಿಕೊಂಡಿದ್ದಾರೆ.
ಕೊಡಗಿನಲ್ಲಿ ರೆಸಾರ್ಟ್‍ನಲ್ಲಿ ಕಾಂಗ್ರೆಸ್‍ನ ಸದಸ್ಯರಲ್ಲಿ ಆಸೆ ಆಮಿಷಗಳಿಗೆ ಒಳಗಾಗಿ ಯಾರಾದರೂ ಬಿಜೆಪಿಯತ್ತ ಜಿಗಿಯಬಹುದು ಎನ್ನುವ ಆತಂಕದಲ್ಲಿಯೇ ಶಾಸಕ ಎಸ್.ಟಿ ಸೋಮಶೇಖರ್ ಸೇರಿದಂತೆ ಅನೇಕ ,ಮುಖಂಡರನ್ನು ಕಾವಲಿಗೆ ನಿಯೋಜಿಸಲಾಗಿದೆ.ಕೆಲ ಮುಖಂಡರೂ ಆಗಾಗ ಭೇಟಿ ನೀಡಿ ಎಲ್ಲವೂ ಸರಿ ಇದೆಯೇ ಎನ್ನುವ ಉಸ್ತುವಾರಿ ಕೂಡ ಮಾಡುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳದು ಒಂದು ರೀತಿಯ ಸಮಸ್ಯೆಯಾದರೆ ಹೆಚ್ಚು ಸ್ಥಾನ ಪಡೆದಿದ್ದರೂ ಮಹಾನಗರ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಕೈ ತಪ್ಪಿ ಹೋಗುತ್ತಿದೆಯೆಲ್ಲಾ ಎನ್ನವ ಆತಂಕದಿಂದಾಗಿ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಸರಣಿ ಪ್ರತಿಭಟನೆ ನಡೆಸುತ್ತಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಪವಿತ್ರವಾದುದು ಇದು ಸರಿಯಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.
ಕಾಂಗ್ರೆಸ್ ಸದಸ್ಯರು ಇಂದು ಮಡಿಕೇರಿಯಲ್ಲಿಯೇ ವಾಸ್ತವ್ಯ ಹೂಡಲಿದ್ದು ನಾಳೆ ದೇವನಹಳ್ಳಿ ಬಳಿ ಇರುವ ಕ್ಲಾರ್ಕ್ ಎಕ್ಸಾರ್ಟಿಕಾ ರೆಸಾರ್ಟ್‍ಗೆ ಸ್ಥಳಾಂತರವಾಗಲಿದ್ದಾರೆ.ಅಲ್ಲಿಂದ ಮೇಯರ್ ಚುನಾವಣೆ ನಡೆಯುವ ಸೆ.11 ರಂದು ನೇರವಾಗಿ ಪಾಲಿಕೆಗೆ ಬರಲು ನಿರ್ಧರಿಸಿದ್ದಾರೆ.
ಜೆಡಿಎಸ್ ಸದಸ್ಯರೂ ಕೂಡ ನಾಳೆ ಬೆಂಗಳೂರಿಗೆ ಆಗಮಿಸಿ ರೆಸಾರ್ಟ್‍ನಲ್ಲಿ ತಂಗಲಿದ್ದಾರೆ.ಅಲ್ಲಿಂದಲೇ ನಾಡಿದ್ದು ಪಾಲಿಕೆ ಕಛೇರಿಗೆ ಪಕ್ಷೇತರರ ಜತೆಗೂಡಿ ಆಗಮಿಸಲಿದ್ದಾರೆ.
ಇನ್ನೂ ಬಿಜೆಪಿ ನಾಯಕರಂತೂ ಕೈಗೆ ಬಂದ ತುತ್ತು ಕಳೆದುಕೊಂಡು ಪರಿತಪಿಸುತ್ತಾ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮೈತ್ರಿಗೆ ಅಪಸ್ವರ ಎತ್ತಿದ್ದಾರೆ.,ಇದನ್ನೇ ಬಂಡವಾಳ ಮಾಡಿಕೊಂಡು ಸಹಿಸಂಗ್ರಹ ಸೇರಿದಂತೆ ಮತ್ತಿತರ ಚಟುವಟಿಕೆಯಲ್ಲಿ ಭಾಗವಹಿಸಿ ಪ್ರತಿಭಟನೆಯ ಮೊರೆ ಹೋಗಿದ್ದಾರೆ.
ನಾಡಿದ್ದು ನಡೆಯಲಿರುವ ಮೇಯರ್ ಚುಣಾವಣೆವರೆಗೂ ತಮ್ಮ ತಮ್ಮ ಪಕ್ಷಗಳ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವುದು ಮೂರು ಪಕ್ಷಗಳಿಗೆ ತಲೆ ಬಿಸಿಯನ್ನು ಮತ್ತಷ್ಟು ಹೆಚ್ಚು ಮಾಡಿದೆ.
