ಕನ್ನಡ ವಾರ್ತೆಗಳು

ಬಂಟ್ವಾಳ ತಾಲೂಕು 16ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ಕೆ. ಚಿನ್ನಪ್ಪ ಗೌಡ ಆಯ್ಕೆ

Pinterest LinkedIn Tumblr

cennappa_gauda_prdint

ಮಂಗಳೂರು,ಸೆ.09:  ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಜ್ಞಾನ ಮಂದಿರದಲ್ಲಿ ಸೆ. 19, 20 ರಂದು ನಡೆಯಲಿರುವ ಬಂಟ್ವಾಳ ತಾಲೂಕು 16 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಂಗಳೂರು ತುಳು ಮತ್ತು ಕನ್ನಡ ಜಾನಪದ ವಿದ್ವಾಂಸ, ಮಂಗಳೂರು ವಿವಿ ಹಿರಿಯ ಪಾಧ್ಯಾಪಕ, ಸಿಂಡಿಕೇಟ್ ಸದಸ್ಯ, ಕಲಾನಿಕಾಯ ಡೀನ್, ಮೂಲತ: ವಿಟ್ಲ ಗ್ರಾಮದ ಕೂಡೂರು ನಿವಾಸಿ. ಡಾ. ಕೆ. ಚಿನ್ನಪ್ಪ ಗೌಡ ಆಯ್ಕೆಯಾಗಿದ್ದಾರೆ.

ಮಂಗಳೂರು ವಿವಿ ಕುಲಸಚಿವರಾಗಿ, ಕನ್ನಡ ಸ್ನಾತಕೋತ್ತರ ಅಧಯನ ಮತ್ತು ಸಂಶೋಧನಾ ಕೇಂದ್ರ, ಕನ್ನಡ ಅಧ್ಯಯನ ಮಂಡಳಿ, ಮಂಗಳೂರು ವಿವಿ ಮಾಹಿತಿ ಕೈಪಿಡಿ ಯೋಜನೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಡಾ| ದಯಾನಂದ ಪೈ ಮತ್ತು ಟಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಮಂಗಳೂರು ವಿವಿ ಪ್ರಸಾರಾಂಗ, ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ಮಂಗಳೂರು, ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಮಾಡಿದ್ದಾರೆ.

ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ 29 ಕೃತಿಗಳು, 64 ಸಂಪಾದಿತ ಕೃತಿಗಳು, 47 ಸಂಶೋಧನ ಲೇಖನಗಳು ಪ್ರಕಟವಾಗಿವೆ. ಅಂತರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯ ಮಟ್ಟದ 74 ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

ಫಿನ್‌ಲ್ಯಾಂಡ್‌ಗೆ ಐದು ಬಾರಿ ಪ್ರವಾಸಗೈದು ತುರ್ಕು ವಿವಿ ಜಾನಪದ ಮತ್ತು ತೌಲನಿಕ ಮತಧರ್ಮಗಳ ಅಧಯನ ಮಾಡಿರುತ್ತಾರೆ. ಜಪಾನ್, ಜರ್ಮನಿ ದೇಶಗಳಲ್ಲಿ ಸಂದರ್ಶಕ ಪಾಧ್ಯಾಪಕರಾಗಿ ಕಾರ್ಯನಿರ್ವಹಿಸಿರುವ ಇವರು 35 ವರ್ಷಗಳಿಂದ ಬೋಧನೆ ಮತ್ತು ಸಂಶೋಧನಾ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ತುಳು ಜನಪದ ಕತೆಗಳ ಸಂಗ್ರಹ, ಸಂಪಾದನೆ ಪ್ರಕಟನೆ ಯೋಜನೆ, ಯಕ್ಷಗಾನ ವಸ್ತು ಸಂಗ್ರಹಾಲಯ ನಿರ್ಮಾಣ ದ.ಕ. ಮತ್ತು ಕೊಡಗು ಜಿಲ್ಲೆಯ ಜಾನಪದ ವಸ್ತು ಸಂಗ್ರಹಾಲಯ ಸಂಶೋಧನಾ ಯೋಜನೆಗಳ ಅನುಷ್ಠಾನಕಾರರು. ಭೂತಾರಾಧನೆ ಕೆಲವು ಅಧಯನಗಳು, ಜಾಲಾಟ ಸಂಶೋಧನಾ ಲೇಖನ, ಸಂಸ್ಕೃತಿ ಸಿರಿ, ಹಿರಿಯ ಕವಿ ಅ.ಗೌ.ಕಿನ್ನಿಗೋಳಿ, ಭೂತಾರಾಧನೆ ಜಾನಪದೀಯ ಅಧಯನ ಪಿ‌ಎಚ್‌ಡಿ ಮಹಾಪ್ರಬಂಧ ಇವರ ಪ್ರಕಟಿತ ಕೃತಿಗಳು.

ದ.ಕ. ಜಿಲ್ಲೆಯ ಕೈಪಿಯತ್ತುಗಳು, ಸೇರಿಗೆ, ಪನಿಯಾರ, ರತ್ನಮಾನಸ, ಆರೋಹಣ, ತ್ಯಾಗ ಸಂದೇಶ, ಪ್ರತಿಷ್ಠಾನ, ಗೌಡ ಜನಾಂಗ ಇತಿಹಾಸ ಸಂಸ್ಕೃತಿ, ನುಡಿವಸಗೆ, ಕರಾವಳಿಯ ಪ್ರಬಂಧಗಳು, ಅನನ್ಯ, ಅಯನ, ತಿಬಾರ ಉಳ್ಳಾಯ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳು, ಕರಾವಳಿಯ ಕತೆಗಳು, ಕನ್ನಡ ಪತ್ರಿಕೆ ಮತ್ತು ಮಹಿಳೆ, ಯಕ್ಷಗಾನ ಪ್ರಸಂಗ ಸಂಚಯ, ಕೊಡವ ರಂಗಭೂಮಿ ಅವರ ಸಂಪಾದಿತ ಕೃತಿಗಳು.

ಪ್ರಸಾರಾಂಗ ಪ್ರಚಾರೋಪನ್ಯಾಸ ಮಾಲಿಕೆಯ ಪ್ರಧಾನ ಸಂಪಾದಕರಾಗಿ 28 ಕೃತಿಗಳನ್ನು , ಯಕ್ಷಗಾನ ಅಧಯನ ಕೇಂದ್ರದ ಪ್ರಕಟನೆಗಳ ಪಧಾನ ಸಂಪಾದಕರಾಗಿ 8 ಕೃತಿಗಳು, ಮಂಗಳ ಪಠ್ಯಪುಸ್ತಕ ಮಾಲಿಕೆಯ ಪ್ರಧಾನ ಸಂಪಾದಕರಾಗಿ ಪದವಿ ಮಟ್ಟದ 24 ಪಠ್ಯಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಡಾ| ಕೋಟ ಶಿವರಾಮ ಕಾರಂತ ಪ್ರಶಸ್ತಿ, ಸಂದೇಶ ರಾಜ್ಯ ಪ್ರಶಸ್ತಿ, ಪ್ರೊ| ಕು.ಶಿ. ಹರಿದಾಸ ಭಟ್ಟ ಜಾನಪದ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ, ಕುವೆಂಪು ದೀಪ ಪ್ರಶಸ್ತಿ, ಶ್ರೀಮಯ ಯಕ್ಷತ್ರಿವೇಣಿ ಪ್ರಶಸ್ತಿ ಅವರಿಗೆ ಸಂದಿರುವ ಗೌರವಗಳು.

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧಕ್ಷ ಪ್ರದೀಪ ಕುಮಾರ ಕಲ್ಕೂರ ಇವರ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಗೌರವ ಕಾರ್ಯದರ್ಶಿಗಳಾದ ಬಿ. ಐತ್ತಪ್ಪ ನಾಯ್ಕ, ಡಾ. ಎಂ.ಪಿ. ಶ್ರೀನಾಥ್, ಕೋಶಾಧಿಕಾರಿ ಕೆ. ಮೋಹನ ರಾವ್, ಬಂಟ್ವಾಳ ಕಸಾಪ ಅಧಕ್ಷ ಜಯಾನಂದ ಪೆರಾಜೆ ಕಾರ್ಯದರ್ಶಿ ಡಾ. ಗಿರೀಶ್ ಭಟ್ ಅಜಕ್ಕಳ, ಸಮ್ಮೇಳನ ಸಮಿತಿ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಅವರನ್ನೊಳಗೊಂಡ ಸಮಿತಿಯು ಅಧ್ಯಕ್ಷರ ಆಯ್ಕೆ ಪ್ರಕ್ರಿಯೆನ್ನು ನಡೆಸಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆಗೊಳಿಸಿದೆ.

Write A Comment