ಬೆಂಗಳೂರು,ಸೆ.8; ಕಾಡುಗೊಂಡನಹಳ್ಳಿಯ ಕಿರು ಅರಣ್ಯದ ಬಳಿ ಮ್ಯಾನ್ ಹೋಲ್‍ಗೆ ತಳ್ಳಿ ಕೊಲೆಗೈದ ಮೂವರು ಮಕ್ಕಳಲ್ಲಿ ಇನ್ನೂ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿಲ್ಲ.
ಮುಂಜಾನೆಯಿಂದ ಜಲಮಂಡಲಿ ಸಿಬ್ಬಂದಿ ವಾಟರ್‍ಜೆಟ್ ಬಳಸಿ ಸುಮಾರು ಎರಡು ಕಿ,ಮೀಗಳ ವರೆಗೆ ಮ್ಯಾನ್ ಹೋಲ್‍ಗಳು ಒಳಚರಂಡಿಯನ್ನು ಶೋಧಿಸಿದರಾದರೂ ಮಧ್ಯಾಹ್ನದವರೆಗೆ ಮೃತದೇಹಗಳು ದೊರೆತಿಲ್ಲ.
ಕಿರು ಅರಣ್ಯದ ಮ್ಯಾನ್ ಹೋಲ್‍ನಲ್ಲಿ ರಹೀಂಬೇಗ್(4)ನ ಶವ ನಿನ್ನೆ ರಾತ್ರಿ ಪತ್ತೆಯಾಗಿದ್ದು ಮಳೆಯ ಕಾರಣ ಕಾರ್ಯಾಚರಣೆ ನಿಲ್ಲಿಸಿ ಮುಂಜಾನೆಯಿಂದ ಶೋಧ ನಡೆಸಲಾಯಿತಾದರೂ ಇಲ್ಲಿಯವರೆಗೆ ಉಸ್ಮಾಬೇಗಂ(6)ಹಾಗೂಅಬ್ಬಾಸ್ ಬೇಗ್(8)ನ ಶವ ದೊರೆತಿಲ್ಲ.
ಮ್ಯಾನ್ ಹೋಲ್‍ಗೆ ತಳ್ಳಿ ಕೊಲೆ ಮಾಡಿರುವ ಮಕ್ಕಳ ತಾಯಿ ನಾಜಿಯಾ ಅವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಫಯೂಮ್‍ಖಾನ್ ಮಕ್ಕಳನ್ನು ಒಂದು ವಾರದ ಹಿಂದೆ ಕಾಡುಗೊಂಡನಹಳ್ಳಿಯ ಕಿರು ಅರಣ್ಯದ ಬಳಿ ಮ್ಯಾನ್ ಹೋಲ್ ಬಳಿ ಕರೆದೊಯ್ದಿದ್ದ.
ಮೊದಲು ರಹೀಂಬೇಗ್‍ನನ್ನು ಬಗ್ಗಿ ನೋಡುವಂತೆ ಮಾಡಿ ನೂಕಿ ಆತನನ್ನು ರಕ್ಷಿಸುವ ನೆಪದಲ್ಲಿ ಉಳಿದ ಮಕ್ಕಳನ್ನು ಮ್ಯಾನ್ ಹೋಲ್‍ಗೆ ತಳ್ಳಿ ಕೊಲೆ ಮಾಡಿದ್ದ.
ನಾಜಿಯಾ ಫಯೂಮ್‍ಖಾನ್ ನೊಂದಿಗೆ ಸಂಬಂಧ ಹೊಂದಿದ್ದರೂ ಆತ ಹೊರಹೋಗಿದ್ದಾಗ ಮತ್ತೊಬ್ಬನ ಜೊತೆ ಇದ್ದುದರಿಂದ ಆಕ್ರೋಶಗೊಂಡ ಫಯೂಮ್ ಖಾನ್ ಆಕೆಯ ಮಕ್ಕಳನ್ನು ಮ್ಯಾನ್‍ಹೋಲ್‍ಗೆ ತಳ್ಳಿ ಕೊಲೆ ಮಾಡಿ ನಾಜಿಯಾಳ ಪತಿ ಇಲಿಯಾಸ್ ಬೇಗಂ ಮೇಲೆ ಆರೋಪಮಾಡಿದ್ದ.
ಪೊಲೀಸರ ಹಾದಿ ತಪ್ಪಿಸಿದ ಫಯೂಮ್‍ಖಾನ್‍ನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
