ಕಾನ್ಪುರ: ಸಾಂಪ್ರದಾಯಿಕ ನಂಬಿಕೆಯ ಹಿನ್ನೆಲೆಯಲ್ಲಿ 40 ವರ್ಷದ ವ್ಯಕ್ತಿಯೊಬ್ಬ ತನ್ನ ಪುತ್ರಿಯನ್ನೇ ಬಲಿ ನೀಡಿದ್ದಾನೆ. ಅಲ್ಲದೆ, ಬಲಿ ಕೊಟ್ಟಾದ ನಂತರದಲ್ಲಿ ಉನ್ಮತ್ತನಾಗಿದ್ದ ಆತ, ಶವದ ಸುತ್ತಲೂ ಕುಣಿದು ಕುಪ್ಪಳಿಸಿದ್ದಾನೆ.
ಕಾನ್ಪುರ ಬಳಿಯ ಸಿಕಂದ್ರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ತನ್ನ ಮನೆಗೆ ಒಳಿತಾಗುತ್ತದೆ ಎಂಬ ಕಾರಣಕ್ಕಾಗಿ ಗಿರಿಜೇಶ್ ಪಾಲ್ (40) ತನ್ನ 9 ವರ್ಷದ ಪುತ್ರಿ ಖುಷಿಯನ್ನು ಬಲಿಗೊಟ್ಟಿದ್ದಾನೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಸದ್ಯ ಪಾಪಿಷ್ಠ ತಂದೆ ಪೊಲೀಸರ ವಶದಲ್ಲಿದ್ದಾನೆ.
ಪತ್ನಿ ಸುನೀತ ತನ್ನ ಪುತ್ರಿ ಖುಷಿಯನ್ನು ಮನೆಯಲ್ಲೇ ಬಿಟ್ಟು, ತಮ್ಮ ಇನ್ನಿಬ್ಬರು ಮಕ್ಕಳಾದ ಅಂಕಿತ(15) ಮತ್ತು ಅಮನ್(12) ಅವರು ಪಕ್ಕದ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಗಿರಿಜೇಶ್ ಈ ಅಕೃತ್ಯ ಎಸಗಿದ್ದಾನೆ.
ಊರಿನಿಂದ ಹಿಂದಿರುಗಿ ಬಂದು, ಗಿರಿಜೇಶ್ ಇದ್ದ ಕೋಣೆಯ ಬಾಗಿಲನ್ನು ತಟ್ಟಿದರೂ ಆತ ಬಾಗಿಲು ತೆರೆಯಲಿಲ್ಲ. ಜತೆಗೆ ಖುಷಿ ಕೂಡ ಕಾಣುತ್ತಿರಲಿಲ್ಲ. ಅನುಮಾನಗೊಂಡು ಬಾಗಿಲ ಸಂದಿಯಲ್ಲಿ ನೋಡಿದಾಗ, ಕೋಣೆಯ ತುಂಬೆಲ್ಲಾ ರಕ್ತ ಹರಡಿತ್ತು. ಬಾಗಿಲು ಒಡೆದು ಒಳ ಹೋದಾಗ ಗಿರಿಜೇಶ್ ತನ್ನ ಪುತ್ರಿ ಖುಷಿಯನ್ನು ಬಲಿಗೊಟ್ಟಿದ್ದು ತಿಳಿಯಿತು. ತಕ್ಷಣವೇ ನರೆಹೊರೆಯವರಿಗಲ್ಲದೆ, ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಬಂದು ಬಾಗಿಲು ಒಡೆದಾಗ ಉನ್ಮತ್ತನಾಗಿದ್ದ ಗಿರಿಜೇಶ ಪುತ್ರಿಯ ಶವದ ಸುತ್ತಲೂ ಕುಣಿಯುತ್ತಿದ್ದದ್ದು ಕಂಡುಬಂದಿದ್ದಾಗಿ ಸುನೀತ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ವಿವರಿಸಿದ್ದಾರೆ.
ಕೆಲವು ದಿನಗಳಿಂದ ಗಿರಿಜೇಶ್ ಮಾಟ-ಮಂತ್ರದ ಬಗ್ಗೆ ಮಾತನಾಡುತ್ತಿದ್ದ. ಜತೆಗೆ, ಯಾರನ್ನಾದರೂ ಬಲಿ ಕೊಡಬೇಕೆಂದು ಬಡಬಡಿಸುತ್ತಿದ್ದನೆಂದು ಸುನೀತ ದೂರಿನಲ್ಲಿ ಹೇಳಿದ್ದಾರೆ. ಆರೋಪಿ ಗಿರಿಜೇಶ್ನ ಮಾನಸಿಕ ಆರೋಗ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವುದಾಗಿ ತಿಳಿಸಿದ್ದಾರೆ.
