ಕಠ್ಮಂಡು, ಸೆ.7: ನೇಪಾಳದಲ್ಲಿ ಮಾರ್ಚ್‌ನಲ್ಲಿ ಭೀಕರ ಭೂಕಂಪ ಸಂಭವಿಸಿದ ಬಳಿಕ ಪ್ರಪಂಚದ ಅತಿ ಎತ್ತರದ ಶಿಖರವಾಗಿರುವ ವೌಂಟ್ ಎವರೆಸ್ಟ್ ಏರಲು ಸರಕಾರ ಅನುಮತಿ ನೀಡಿದೆಯಾದರೂ ಎವರೆಸ್ಟ್ ಏರಲು ಜಪಾನ್‌ನ ನೊಬೊಕಝು ಕುರಿಕಿಯೊಬ್ಬರೇ ಆಸಕ್ತಿ ವಹಿಸಿದ್ದಾರೆ.
ಇದರಿಂದಾಗಿ ಈ ಬಾರಿ ಎವರೆಸ್ಟ್ ಆರೋಹಣ ಗೈಯಲಿರುವ ಏಕೈಕ ಪರ್ವತಾರೋಹಿ ಅವರಾಗಲಿದ್ದಾರೆ.
ಎವರೆಸ್ಟ್ ಪರ್ವತಾರೋಹಣ ಋತುವಿಗೆ ಪೂರ್ವಭಾವಿಯಾಗಿ ಅಲ್ಲಿನ ಅತ್ಯಂತ ಅಪಾಯಕಾರಿ ಖುಂಬು ಹಿಮಪಾತ ಪ್ರದೇಶವನ್ನು ಆರೋಹಣಕ್ಕೆ ಸಿದ್ಧಪಡಿಸಲು ತೆರಳಬೇಕಿದ್ದ ಹಿಮತಜ್ಞರಲ್ಲಿ ಓರ್ವರಾದ ಆಂಗ್ ಕಮಿ ಶರ್ಪಾ ಕೂಡಾ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿದ ನಾಲ್ಕು ತಿಂಗಳ ಬಳಿಕ ಆಗಸ್ಟ್‌ನಲ್ಲಿ 8,848 ಮೀಟರ್(29,029 ಅಡಿ) ಎತ್ತರದ ಬೆಟ್ಟಕ್ಕೆ ಹಿಂದಿರುವ ಹಿಮತಜ್ಞರಲ್ಲಿ ಆಂಗ್ ಕಮಿ ಶರ್ಪಾ(63) ಒಬ್ಬರಾಗಿದ್ದಾರೆ. ಅವರು ಮುಂದಿನ ಆರೋಹಣ ಋತುವಿಗೆ ದಾರಿಯನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ. ಈ ಬಾರಿ ಪರ್ವತ ಶೃಂಗವನ್ನು ಏರಲು ಬಯಸಿರುವವರಲ್ಲಿ ಜಪಾನ್‌ನ ನೊಬೊಕಝು ಕುರಿಕಿ ಏಕೈಕ ಪರ್ವತಾರೋಹಿಯಾಗಿದ್ದು, ಅವರ ಸಂಗಡಿಗರ ತಂಡವೂ ಸುಮಾರು 6,400 ಮೀಟರ್ ಎತ್ತರದಲ್ಲಿರುವ 2ನೆ ಶಿಬಿರದವರೆಗೆ ಮಾತ್ರ ಸಂಚರಿಸಲಿದೆ ಎಂದು ವರದಿಗಳು ತಿಳಿಸಿವೆ. ‘‘ಈ ಬಾರಿ ನಮ್ಮ ಕೆಲಸಗಳು ಹಿಂದೆಂದಿಗಿಂತಲೂ ಹೆಚ್ಚು ಕಠಿಣವಾಗಿದೆ. ಭೂಕಂಪದ ಬಳಿಕ ಪರ್ವತದ ಸ್ವರೂಪದಲ್ಲಿ ಬದಲಾವಣೆಯಾಗಿದೆ’’ ಎಂದು ಎವರೆಸ್ಟ್‌ನ ತಳಶಿಬಿರದಿಂದ ದೂರವಾಣಿ ಕರೆಯ ಮೂಲಕ ಹಿಮತಜ್ಞ ಶರ್ಪಾ ತಿಳಿಸಿದ್ದಾರೆ.
ಆಂಗ್ ಕಮಿ ಶರ್ಪಾ ಓರ್ವ ನುರಿತ ಹಿಮವೈದ್ಯರಾಗಿದ್ದು, ಅವರು 1975ರಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ್ದರು. ಇತ್ತೀಚಿಗಿನ ಭೂಕಂಪವು ಬಲಿತೆಗೆದುಕೊಂಡಿರುವ 9 ಸಾವಿರ ಜನರಲ್ಲಿ 19 ಮಂದಿ ಪರ್ವತಾರೋಹಿಗಳೂ ಒಳಗೊಂಡಿದ್ದರು. ಇದರಿಂದ ತನಗೆ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚು ಆತಂಕ ಮೂಡಿದೆ ಎಂದು ಶರ್ಪಾ ಹೇಳುತ್ತಾರೆ.
ಆದರೆ ಇದಾವುದರಿಂದಲೂ ಧೃತಿಗೆಡದ ಜಪಾನ್‌ನ ಪರ್ವತಾರೋಹಿ ಕುರಿಕಿ ಸೆಪ್ಟಂಬರ್ ಮಧ್ಯಭಾಗದಲ್ಲಿ ತಾನು ಎವರೆಸ್ಟ್ ಏರುವ ನಿರ್ಧಾರ ಕೈಗೊಂಡಿದ್ದಾರೆ.
ಕುರಿಕಿ ಪರ್ವತಾರೋಹಣಗೈಯಲಾರಂಭಿ ಸುತ್ತಿರುವಂತೆ ಹಿಮವೈದ್ಯರ ತಂಡವು ದಾರಿಯ ಬಗ್ಗೆ ಕಣ್ಗಾವಲು ನಡೆಸಲಿದ್ದು, ಅವರು ಮರಳಿ ಬರುವುದನ್ನೇ ಕಾದು ನೋಡಲಿದೆ.