ಬರ್ಲಿನ್, ಸೆ.7: ದಾಖಲೆ ಸಂಖ್ಯೆಯ ನಿರಾಶ್ರಿತ ವಲಸಿಗರಿಗೆ ಬೆಂಬಲಾರ್ಥವಾಗಿ ಹಾಗೂ ಈ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುವ ಇತರ ಕ್ರಮಗಳಿಗಾಗಿ 4.4 ಶಕತೋಟಿ ಪೌಂಡ್ ಆರ್ಥಿಕ ನೆರವು ನೀಡಲು ಜರ್ಮನಿಯ ಮೈತ್ರಿ ಸರಕಾರ ಒಪ್ಪಿಗೆ ಸೂಚಿಸಿದೆ.
ನಿರಾಶ್ರಿತರಿಗಾಗಿ ಜರ್ಮನಿಯ ಗಡಿಪ್ರದೇಶವನ್ನು ಮುಕ್ತಗೊಳಿಸಿರುವ ಅಭೂತಪೂರ್ವ ಕ್ರಮಕ್ಕಾಗಿ ಜರ್ಮನಿಯ ಚಾನ್ಸೆಲರ್ ಆ್ಯಂಜೆಲಾ ಮರ್ಕೆಲ್ ತಮ್ಮ ರಾಷ್ಟ್ರದಲ್ಲೇ ತೀವ್ರ ಟೀಕೆಯನ್ನು ಎದುರಿಸುತ್ತಿರುವ ನಡುವೆಯೇ ಈ ಬೆಳವಣಿಗೆ ಕಂಡು ಬಂದಿದೆ.
ಕಳೆದ ಒಂದು ವಾರದ ಅವಧಿಯಲ್ಲಿ ಸುಮಾರು 18 ಸಾವಿರ ವಲಸಿಗರು ಜರ್ಮನಿ ತಲುಪಿದ್ದಾರೆ.
ವಲಸಿಗರ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಹೆಚ್ಚುವರಿ ಆರ್ಥಿಕ ನೆರವು ಒದಗಿಸುವ ಬಗ್ಗೆ ರವಿವಾರ ರಾತ್ರಿ ಮೈತ್ರಿ ಪಕ್ಷಗಳ ನಡುವಿನ ಮಾತುಕತೆಯ ವೇಳೆ ತೀರ್ಮಾನಕ್ಕೆ ಬರಲಾಯಿತು ಎಂದು ವರದಿಗಳು ತಿಳಿಸಿವೆ.
1,50,000 ನಿರಾಶ್ರಿತರಿಗೆ ವಾಸ್ತವ್ಯ ಕೇಂದ್ರಗಳ ಸ್ಥಾಪನೆಗೆ ನೆರವು, ಹೆಚ್ಚುವರಿಯಾಗಿ 3 ಸಾವಿರ ಫೆಡರಲ್ ಪೊಲೀಸರ ನೇಮಕ, ಸಮನ್ವಯ ಹಾಗೂ ಭಾಷಾ ತರಬೇತಿಗಾಗಿ ಹೆಚ್ಚಿನ ಆರ್ಥಿಕ ಸಹಾಯ, ಕೊಸೊವೊ-ಅಲ್ಬಾನಿಯ-ಮಾಂಟೆನಿಗ್ರೊ ರಾಷ್ಟ್ರಗಳಿಗೆ ಸುರಕ್ಷಿತ ರಾಷ್ಟ್ರಗಳ ಸ್ಥಾನಮಾನ ಮತ್ತು ಆ ರಾಷ್ಟ್ರಗಳಿಂದ ವಲಸಿಗರನ್ನು ತ್ವರಿತವಾಗಿ ಕರೆತರುವುದು ಮೊದಲಾದ ಕ್ರಮಗಳನ್ನು ಜರ್ಮನಿ ಪ್ರಕಟಿಸಿದೆ.
24 ಸಾವಿರ ವಲಸಿಗರಿಗೆ ಫ್ರಾನ್ಸ್ ಆಶ್ರಯ
ಪ್ಯಾರಿಸ್, ಸೆ.7: ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ವಲಸಿಗರಿಗೆ ಆಶ್ರಯ ನೀಡುವ ಐರೋಪ್ಯ ಒಕ್ಕೂಟದ ನಿರಾಶ್ರಿತರಿಗಾಗಿನ ಯೋಜನೆಯ ಭಾಗವಾಗಿ ಸುಮಾರು 24 ಸಾವಿರ ನಿರಾಶ್ರಿತರನ್ನು ಸ್ವೀಕರಿಸಲು ತನ್ನ ರಾಷ್ಟ್ರವು ಸಿದ್ಧವಿರುವುದಾಗಿ ಫ್ರಾನ್ಸ್‌ನ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡ್ ಸೋಮವಾರ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದ್ದಾರೆ. ಒಟ್ಟು ಅಂದಾಜು 1,20,000 ನಿರಾಶ್ರಿತರನ್ನು ಸಮಾನ ಹಂಚಿಕೆ ಆಧಾರದಲ್ಲಿ 28 ರಾಷ್ಟ್ರಗಳ ಐರೋಪ್ಯ ಒಕ್ಕೂಟವು ಆಶ್ರಯ ನೀಡಬೇಕೆಂಬುದು ತನ್ನ ಹಾಗೂ ಜರ್ಮನಿಯ ನಾಯಕಿ ಆ್ಯಂಜೆಲಾ ಮರ್ಕೆಲ್‌ರ ಬಯಕೆಯಾಗಿದೆ ಎಂದವರು ಹೇಳಿದ್ದಾರೆ.
ಇದೊಂದು ಚಿಂತಾಜನಕ ಪರಿಸ್ಥಿತಿಯಾಗಿದೆ, ಇದನ್ನು ನಿಯಂತ್ರಣಕ್ಕೆ ತರುವುದು ತುರ್ತು ಅಗತ್ಯವಾಗಿದೆ ಎಂದವರು ಹೇಳಿದ್ದಾರೆ.
ಸಿರಿಯ ನಿರಾಶ್ರಿತರ ಒಳಹರಿವು ಮಿತಿ ಏರಿಕೆ: ಆಸ್ಟ್ರೇಲಿಯ
ಕ್ಯಾನ್‌ಬೆರಾ, ಸೆ.7: ರಾಷ್ಟ್ರವು ಬರಮಾಡಿಕೊಳ್ಳಲಿರುವ ಸಿರಿಯ ನಿರಾಶ್ರಿತರ ಸಂಖ್ಯೆಯನ್ನು ಗಣನೀಯವಾಗಿ ಏರಿಸಲಾಗುವುದು ಎಂದು ಆಸ್ಟ್ರೇಲಿಯದ ಪ್ರಧಾನಿ ಟೋನಿ ಅಬೊಟ್ ಸೋಮವಾರ ತಿಳಿಸಿದ್ದಾರೆ.
ರಾಷ್ಟ್ರದಲ್ಲಿ ಆಶ್ರಯಪಡೆಯಲಿರುವ ನಿರಾಶ್ರಿತರ ನಿರ್ದಿಷ್ಟ ಸಂಖ್ಯೆಯನ್ನು ಮಂಗಳವಾರದ ವೇಳೆಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಮತ್ತು ಅದು ಅತಿದೊಡ್ಡ ಸಂಖ್ಯೆಯಾಗಿರಲಿದೆ ಎಂದವರು ಹೇಳಿದ್ದಾರೆ.
ಜಗತ್ತು ಎದುರಿಸುತ್ತಿರುವ ಮಾನವ ಬಿಕ್ಕಟ್ಟನ್ನು ಬಗೆಹರಿಸಲು ನೆರವು ನೀಡುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ 10 ಸಾವಿರ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸುವಂತೆ ವಿಪಕ್ಷ ಒತ್ತಾಯಿಸಿದೆ. ಸಿರಿಯದ ನಿರಾಶ್ರಿತರ ಬಿಕ್ಕಟ್ಟಿಗೆ ಸಂಬಂಧಿಸಿ ವಿಶ್ವಸಂಸ್ಥೆಯ ನಿರಾಶ್ರಿತರ ಘಟಕ ಮತ್ತು ಜಿನೇವ ಹಾಗೂ ಪ್ಯಾರಿಸ್‌ನಲ್ಲಿರುವ ವಲಸಿಗರಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಂಘಟನೆಗಳ ಮುಖ್ಯಸ್ಥರೊಂದಿಗೆ ನಡೆದ ಮಾತುಕತೆಗಳ ಬಗ್ಗೆ ರಾಷ್ಟ್ರದ ವಲಸೆ ಖಾತೆ ಸಚಿವ ಪೀಟರ್ ಡಟನ್ ವರದಿ ನೀಡಿದ ಕೂಡಲೇ ಆಶ್ರಯ ಪಡೆಯಲಿರುವ ನಿರಾಶ್ರಿತರ ಸಂಖ್ಯೆಯನ್ನು ನಿರ್ಧರಿಸಲಾಗುವುದು ಎಂದು ಪ್ರಧಾನಿ ಅಬೊಟ್ ಹೇಳಿದ್ದಾರೆ.