ಹೊಸದಿಲ್ಲಿ, ಸೆ.7: ಭಾರತ ಕೊನೆಗೂ ತನ್ನಲ್ಲಿರುವ ಚಿರತೆಗಳ ಸಂಖ್ಯೆಯನ್ನು ಅಂದಾಜಿಸಿದೆ. ಕಳೆದ ವರ್ಷ ಹುಲಿ ಗಣತಿಯ ವೇಳೆಯೇ ಮೊತ್ತ ಮೊದಲ ಭಾರತೀಯ ಚಿರತೆಗಳ ಗಣತಿಯನ್ನು ನಡೆಸಲಾಗಿದೆ. ದೇಶಾದ್ಯಂತ ಹುಲಿಗಳ ವಾಸಸ್ಥಳವಿರುವ ಪ್ರದೇಶಗಳಲ್ಲಿ ಹಾಗೂ ಸುತ್ತಮುತ್ತ-ಈಶಾನ್ಯ ವಲಯ ಹೊರತುಪಡಿಸಿ-7,910 ಚಿರತೆಗಳಿವೆಯೆಂದು ಲೆಕ್ಕಹಾಕಲಾಗಿದೆ.
ಹುಲಿಗಣತಿಗೆ ಉಪಯೋಗಿಸಲಾದ ಪದ್ಧತಿಯನ್ನೇ ಚಿರತೆಗಳ ಗಣತಿಗೂ ಬಳಸಲಾಗಿದೆ. ಕ್ಯಾಮರಾ-ಟ್ರಾಪಿಂಗ್ ಮೂಲಕ ಚಿರತೆಗಳ ಚಿತ್ರಗಳನ್ನು ತೆಗೆಯುವುದು, ಅವುಗಳ ಇರುವಿಕೆಯ ಬಗ್ಗೆ ಇತರ ಪುರಾವೆಗಳ ಸಂಗ್ರಹ, ಆ ಬಳಿಕ ಇಡೀ ಕಾಡಿಗೆ ಅನ್ವಯಿಸುವಂತೆ ಗೊತ್ತಿರುವ ಹಾಗೂ ಗೊತ್ತಿಲ್ಲದ ವಿಚಾರಗಳನ್ನು ಸಮಾಂತರಗೊಳಿಸುವುದು ಈ ವಿಧಾನದಲ್ಲಿ ಸೇರಿದೆ.
ತಾವು ಗಣತಿ ಮಾಡಿದ ಪ್ರದೇಶಗಳ ಹೊರಗೂ ಚಿರತೆಗಳಿವೆ. ಈ ಸಂಖ್ಯೆಗಳನ್ನಾಧರಿಸಿ, ಭಾರತದಲ್ಲಿ ಚಿರತೆಗಳ ಸಂಖ್ಯೆ 12ರಿಂದ 14 ಸಾವಿರ ಇರಬಹುದೆಂದು ತಾವು ಅಂದಾಜಿಸಿದ್ದೇವೆಂದು ಗಣತಿಯ ಪ್ರಮುಖ ವಿಜ್ಞಾನಿ ಯಾದವೇಂದ್ರ ದೇವ್ ವಿ. ಝಾಲಾ ತಿಳಿಸಿದ್ದಾರೆ. ಅವರು ಕಳೆದ ವಾರ ಡೆಹ್ರಾಡೂನ್‌ನಲ್ಲಿ ನಡೆದ ಭಾರತದ ವನ್ಯಮೃಗ ಸಂಸ್ಥೆಯ ವಾರ್ಷಿಕ ಸಂಶೋಧನ ವಿಚಾರಗೋಷ್ಠಿಯಲ್ಲಿ ಚಿರತೆಗಳ ಸಂಖ್ಯೆಯನ್ನು ಮಂಡಿಸಿದ್ದಾರೆ.
ಈ ಗಣತಿಯ ಅಂಕಿ-ಅಂಶಗಳು ಚಿರತೆಗಳ ಸಾಂದ್ರತೆ ಹಾಗೂ ಹಂಚಿಕೆಯ ಪ್ರಪ್ರಥಮ ನಿಖರ ಚಿತ್ರಣವನ್ನು ನೀಡಿವೆ. ದೇಶದಲ್ಲಿ 10ರಿಂದ 45 ಸಾವಿರ ಚಿರತೆಗಳಿರಬಹುದೆಂದು ಈ ಹಿಂದೆ ಅಂದಾಜಿಸಲಾಗಿತ್ತು. ಈ ಚಿರತೆ ಗಣತಿಯು ಶಿವಾಲಿಕ್ ಪರ್ವತಗಳು, ಗಂಗಾ ಬಯಲು, ಮಧ್ಯಭಾರತ ಹಾಗೂ ಪಶ್ಚಿಮಘಟ್ಟಗಳ 3,50,000 ಚ.ಕಿ.ಮೀ. ಅರಣ್ಯ ಪ್ರದೇಶವನ್ನು ವ್ಯಾಪಿಸಿದೆ. ಕೆಳ ದರ್ಜೆಯ ಕಂದಾಯ ಅರಣ್ಯಗಳು ಸೇರಿದಂತೆ ಹೆಚ್ಚಿನ ಅರಣ್ಯ ಪ್ರದೇಶವನ್ನು ವ್ಯಾಪಿಸಿದ್ದ ಈ ಕಾರ್ಯದ ವೇಳೆ, 1,647 ಚಿರತೆಗಳ ಸುಮಾರು 17,143 ಚಿತ್ರಗಳನ್ನು ಪಡೆಯಲಾಗಿದೆ. ಚಿರತೆಗಳು ದೇಶಾದ್ಯಂತ ಉತ್ತಮವಾಗಿ ಹಂಚಿಕೆಯಾಗಿರುವುದನ್ನು ಅಧ್ಯಯನ ಕಂಡುಕೊಂಡಿದೆ. ಭಾರತದ ಚಿರತೆಗಳು ‘ಉತ್ತಮ ಆರೋಗ್ಯವಂತವಾಗಿವೆ’ ಎಂಬುದನ್ನು ಇದು ಸೂಚಿಸುತ್ತದೆ.
ಹೆಚ್ಚಿನ ಚಿರತೆಗಳು ಚದುರಿದಂತಿವೆ. ಇದು ಆರೋಗ್ಯವಂತ ವಂಶವಾಹಿ ವಿನಿಮಯವನ್ನು ಖಚಿತಪಡಿಸುತ್ತದೆ. ಆದುದರಿಂದ, ಭಾರತದ ಹುಲಿಗಳನ್ನು ಕಾಡುವ ಪ್ರತ್ಯೇಕತೆಯ ಸಮಸ್ಯೆಯನ್ನು ಚಿರತೆಗಳು ಎದುರಿಸುತ್ತಿಲ್ಲವೆಂದು ಝಾಲಾ ಹೇಳಿದ್ದಾರೆ.
ಹಿಂದಿನ ಅಂದಾಜುಗಳಿಲ್ಲದ ಕಾರಣ ಚಿರತೆಗಳ ಸಂಖ್ಯೆ ವೃದ್ಧಿಸಿದೆಯೇ ಅಥವಾ ಕ್ಷೀಣಿಸಿದೆಯೋ ಎಂದು ತಿಳಿಯಲು ಸಾಧ್ಯವಿಲ್ಲ. ಆದರೆ, ಅವು ಕುರುಚಲು ಹಾಗೂ ಮಾನವ-ಪ್ರಭಾವಿತ ಕಾಡುಗಳಲ್ಲೂ ಜೀವಿಸಬಲ್ಲವು. ಆದುದರಿಂದ ಅವು ಹುಲಿಗಳಿಗಿಂತ ಬಹಳ ಚೆನ್ನಾಗಿ ಜೀವಿಸುತ್ತವೆಯೆಂದು ಅವರು ತಿಳಿಸಿದ್ದಾರೆ. ಆದುದರಿಂದ ಹುಲಿಗಳಂತೆ ಚಿರತೆಗಳಿಗೆ ತಕ್ಷಣಕ್ಕೆ ಅಪಾಯವಿಲ್ಲವೆಂದು ಝಾಲಾ ಅಭಿಪ್ರಾಯಿಸಿದ್ದಾರೆ.
ಆದರೆ, ಭಾರತದಲ್ಲಿ ಚಿರತೆಗಳ ದೀರ್ಘಾವಧಿ ಉಳಿಯುವಿಕೆಗೆ ಆರೋಗ್ಯವಂತ ಕಾಡುಗಳು ನಿರ್ಣಾಯಕವಾಗಿವೆ. ಚಿರತೆಗಳು ಎಲ್ಲ ಕಡೆಯೂ ಇವೆಯೆಂಬ ಭಾವನೆಯಿದೆ. ಆದರೆ, ಅದು ಸರಿಯಲ್ಲ. ಚಿರತೆಗಳಿಗೆ ಆಸುಪಾಸಿನಲ್ಲಿ ಅರಣ್ಯದ ಸುರಕ್ಷಿತ ಪ್ರದೇಶವಿರುವುದು ಅಗತ್ಯ. ಅವು ಶುದ್ಧ ಕೃಷಿ ಭೂಮಿ ಇರುವ ಪ್ರದೇಶಗಳಲ್ಲಿ ಕಂಡುಬರುವುದಿಲ್ಲವೆಂದು ಅವರು ತಿಳಿಸಿದ್ದಾರೆ.
ಅಂದಾಜು 1,817 ಚಿರತೆಗಳನ್ನು ಹೊಂದಿರುವ ಮಧ್ಯಪ್ರದೇಶವು ಭಾರತದಲ್ಲೇ ಅಗ್ರ ಚಿರತೆ ರಾಜ್ಯವಾಗಿ ಮೂಡಿಬಂದಿದೆ. ಅದರ ಬಳಿಕ ಕರ್ನಾಟಕ (1,129), ಮಹಾರಾಷ್ಟ್ರ(905), ಛತ್ತೀಸ್‌ಗಡ(846) ಹಾಗೂ ತಮಿಳುನಾಡು(815) ರಾಜ್ಯಗಳು ಬರುತ್ತವೆ.
ಇನ್ನೊಂದು ಮಹತ್ವದ ಚಿರತೆ ರಾಜ್ಯವಾಗಿರುವ ಉತ್ತರಾಖಂಡ್‌ನಲ್ಲಿ 703 ಚಿರತೆಗಳಿವೆಯೆಂದು ಅಧ್ಯಯನ ಅಂದಾಜಿಸಿದೆ. ಆದರೆ, ಹಿಮಾಲಯದ ಎತ್ತರ ಪ್ರದೇಶಗಳಲ್ಲಿ ಗಣತಿ ನಡೆಸದಿರುವ ಕಾರಣ, ಅವುಗಳ ನೈಜ ಸಂಖ್ಯೆ 300-400ರಷ್ಟು ಹೆಚ್ಚಿರಬಹುದೆಂದು ಝಾಲಾ ಹೇಳಿದ್ದಾರೆ.
ಗುಜರಾತ್, ರಾಜಸ್ಥಾನದ ಕೆಲವು ಭಾಗಗಳು, ಪೂರ್ವಭಾರತ ಹಾಗೂ ಸಂಪೂರ್ಣ ಈಶಾನ್ಯ ಭಾಗಗಳಲ್ಲಿ ಚಿರತೆ ಗಣತಿ ನಡೆದಿಲ್ಲ.
ಈಶಾನ್ಯ ಭಾರತದಲ್ಲಿ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿರುವ 34 ಚಿರತೆಗಳನ್ನು ತಾವು ಸೇರಿಸಿದ್ದೇವೆ. ಸಂಬಂಧಿತ ಅರಣ್ಯ ಇಲಾಖೆಗಳು 1ನೆ ಹಂತದ ಚಿರತೆಗಳ ಗಣತಿಯಲ್ಲಿ ಎಲ್ಲ ಅರಣ್ಯ ಪ್ರದೇಶಗಳ ಮಾದರಿ ನೀಡಿಲ್ಲವಾದುದರಿಂದ ಪ್ರದೇಶದಲ್ಲಿ ಸರಿಯಾದ ಗಣತಿ ಸಾಧ್ಯವಾಗಲಿಲ್ಲವೆಂದು ಝಾಲಾ ತಿಳಿಸಿದ್ದಾರೆ.
ರಾಷ್ಟ್ರೀಯ