ಬೆಂಗಳೂರು, ಸೆ.1: ಬಿಬಿಎಂಪಿ ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆ ಸೆ.11ಕ್ಕೆ ನಿಗದಿಯಾಗಿದೆ ಎಂದು ಹೇಳಲಾಗಿದೆ. ಬಿಬಿಎಂಪಿ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಯಾವ ಪಕ್ಷಕ್ಕೂ ಬಹುಮತ ಬರದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರ ಹಿಡಿಯಲು ಮೂರೂ ಪಕ್ಷಗಳು ಬಿರುಸಿನ ರಾಜಕೀಯ ಚಟುವಟಿಕೆ ನಡೆಸುತ್ತಿವೆ. ವಿಳಂಬವಾದಷ್ಟೂ ರಾಜಕೀಯ ಕಗ್ಗಂಟಾಗುತ್ತಿದೆ. ನಿರ್ಣಾಯಕ ಪಾತ್ರ ವಹಿಸುವ ಜೆಡಿಎಸ್ ಯಾರತ್ತ ಒಲವು ತೋರಿಸಲಿದೆ ಎಂಬ ಕುತೂಹಲ ಕೆರಳಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಗೆ ಬೆಂಬಲ ನೀಡಲು ಜೆಡಿಎಸ್ ಮುಂದಾಗಿರುವುದರಿಂದ ವಿಳಂಬ ಮಾಡದೆ ತಕ್ಷಣವೇ ಮೇಯರ್ ಚುನಾವಣೆಯ ವೇಳಾಪಟ್ಟಿ ನಿಗದಿ ಮಾಡಿ ಆದಷ್ಟು ಶೀಘ್ರವೇ ಮೇಯರ್ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಮುಂದಾಗಿದೆ.
ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ ಸಾಮಾನ್ಯ ಸಭೆ ಕರೆಯಲು ನಿರ್ದಿಷ್ಟ ಕಾಲವಕಾಶ ಅಗತ್ಯ. ಆದರೆ, ಆರಂಭದಲ್ಲಿ ಮೊದಲ ಸಭೆ ನಡೆಸಲು ಇಂತಹ ಕಾಲಮಿತಿಯ ಗಡುವಿಲ್ಲ. ಆದಷ್ಟು ಶೀಘ್ರ ಎಂದು ನಿಯಮದಲ್ಲಿ ಉಲ್ಲೇಖಿಸಿರುವುದರಿಂದ ಇದರ ಲಾಭ ಪಡೆದು ತಕ್ಷಣವೇ ಮೇಯರ್ ಆಯ್ಕೆಗೆ ದಿನಾಂಕ ನಿಗದಿಪಡಿಸುವಂತೆ ಪ್ರಾದೇಶಿಕ ಆಯುಕ್ತರ ಮೇಲೆ ಒತ್ತಡ ಏರಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳು, ಸಿಇಒಗಳು ಮತ್ತು ಇಲಾಖೆ ಮುಖ್ಯಸ್ಥರ ಸಭೆ ಕರೆದಿದ್ದರು, ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ಜಯಂತಿ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಮುಗಿದ ಬಳಿಕವೇ ಬಿಬಿಎಂಪಿ ಚುನಾವಣೆಗೆ ವೇಳಾ ಪಟ್ಟಿ ನಿಗದಿಯಾಗುವ ಸಾಧ್ಯತೆಗಳಿವೆ.
