ಕೊಲಂಬೋ: ಶ್ರೀಲಂಕಾ ವಿರುದ್ಧ ನಡೆದ ಅಂತಿಮ ಟೆಸ್ಟ್ ನಲ್ಲಿ ಭಾರತ 117 ರನ್ಗಳಿಂದ ಜಯಗಳಿಸುವ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಲಂಕಾ ನೆಲದಲ್ಲಿ 22 ವರ್ಷಗಳಿಂದ ಮರೀಚಿಕೆಯಾಗಿದ್ದ ಗೆಲುವನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ತನ್ನದಾಗಿಸಿಕೊಂಡಿದೆ.
386ರನ್ಗಳ ಗುರಿಯನ್ನು ಬೆನ್ನೆಟ್ಟಿದ ಲಂಕಾ ಕೊನೆಯ ದಿನ ಉತ್ತಮ ಹೋರಾಟ ನೀಡಿತ್ತು. ನಿನ್ನೆ 67 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಲಂಕಾ 85 ಓವರ್ಗಳಲ್ಲಿ 268 ರನ್ಗಳಿಗೆ ಸರ್ವಪತನ ಕಂಡಿತು.
ಲಂಕಾ ಪರವಾಗಿ ನಾಯಕ ಏಂಜಲೋ ಮ್ಯಾಥ್ಯುಸ್ 110 ರನ್, ಪಿರೇರಾ 70 ರನ್ಗಳಿಸುವ ಮೂಲಕ ಉತ್ತಮ ಉತ್ತಮ ಹೋರಾಟ ನೀಡಿದ್ದರು. ಆದರೆ ಕೊನೆಯಲ್ಲಿ ಬೌಲರ್ಗಳು ಬೇಗನೇ ಔಟಾದ ಕಾರಣ ಲಂಕಾ ಭಾರತದ ವಿರುದ್ಧ ಸೋಲೊಪ್ಪಿಕೊಂಡಿತು.
ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ನಲ್ಲಿ 58 ರನ್ಗಳಿಸಿದ್ದ ಅಶ್ವಿನ್ ಬೌಲಿಗ್ನಲ್ಲೂ ಮಿಂಚಿ 4 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ 3 ವಿಕೆಟ್, ಉಮೇಶ್ ಯಾದವ್ 2 ವಿಕೆಟ್. ಅಮಿತ್ ಮಿಶ್ರಾ 1 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಚೇತೇಶ್ವರ ಪೂಜಾರ ಪಡೆದುಕೊಂಡೆರೆ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆರ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
22 ವರ್ಷಗಳ ಬಳಿಕ ಸರಣಿ ಗೆದ್ದ ಟೀಂ ಇಂಡಿಯಾ
ಟೀಂ ಇಂಡಿಯಾ ಲಂಕಾ ಪ್ರವಾಸ ಮಾಡುವಾಗಲೇ ನಿರೀಕ್ಷೆಯ ಮೂಟೆಯನ್ನು ಹೊತ್ತುಕೊಂಡು ಸಾಗಿತ್ತು. ಯಾಕೆಂದರೆ ಕಳೆದ 22 ವರ್ಷಗಳಿಂದ ಶ್ರೀಲಂಕಾದ ನೆಲದಲ್ಲಿ ಸರಣಿ ಗೆಲುವು ಎನ್ನುವುದು ಮರೀಚಿಕೆಯಾಗಿತ್ತು. ಆದರೆ ಈ ಬಾರಿ ಹಾಗೆ ಆಗಲಿಲ್ಲ. ಕೊಹ್ಲಿ ನೇತೃತ್ವದ ಯುವ ಪಡೆ ಲಂಕಾವನ್ನು ಲಂಕಾದ ನೆಲದಲ್ಲೇ ಎರಡು ಬಾರಿ ಮಣಿಸುವ ಮೂಲಕ ಪ್ರಶಸ್ತಿಯ ಬರ ನೀಗಿಸಿಕೊಂಡಿತು.
1993ರಲ್ಲಿ ಅಂದಿನ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಟೀಂ ಇಂಡಿಯಾ, 3 ಸರಣಿಯ ಟೆಸ್ಟ್ ಪಂದ್ಯದಲ್ಲಿ ಲಂಕಾ ವಿರುದ್ಧ 1-0ಯಿಂದ ಗೆಲುವಿನ ಜಯಭೇರಿ ಬಾರಿಸಿದ್ದು ಬಿಟ್ಟರೆ, ಮತ್ತೆ ಸರಣಿಯನ್ನು ಗೆದ್ದಿರಲಿಲ್ಲ.
1993ರಿಂದ ಇಲ್ಲಿಯವರೆಗೆ 6 ಸರಣಿಗಳನ್ನು ಭಾರತ ಆಡಿತ್ತು. ಆಡಿದ 6 ಸರಣಿಗಳಲ್ಲಿ ಕೇವಲ ಒಂದು ಸರಣಿಯಲ್ಲಿ ಮಾತ್ರ ಜಯಗಳಿಸಿತ್ತು. 15 ಟೆಸ್ಟ್ ಪಂದ್ಯಗಳಲ್ಲಿ 4 ಗೆಲುವು ಸಿಕ್ಕಿದ್ದರೆ, 5ರಲ್ಲಿ ಸೋಲು ಕಂಡಿತ್ತು. 6 ಪಂದ್ಯಗಳು ಡ್ರಾ ಆಗಿತ್ತು. ಈ ಸರಣಿಗಳು ನಡೆಯುವ ವೇಳೆ ಟೀಂ ಇಂಡಿಯಾವನ್ನು ಅನಿಲ್ ಕುಂಬ್ಳೆ, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಎಂ.ಎಸ್ ಧೋನಿಯಂತ ಘಟಾನುಘಟಿ ನಾಯಕರು ಮುನ್ನಡೆಸಿದ್ದರೂ ಲಂಕಾದಲ್ಲಿ ಇವರಿಗೆ ಗೆಲುವು ಸಿಕ್ಕಿರಲಿಲ್ಲ.
ಹೀಗಾಗಿ ಬಾಂಗ್ಲಾ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ನಾಯಕನಾಗಿ ಕೊಹ್ಲಿ ಆಡಿದ್ದ ಕಾರಣ ನಿರೀಕ್ಷೆ ಹೆಚ್ಚಿತ್ತು. ನಿರೀಕ್ಷೆಯನ್ನು ಹುಸಿ ಮಾಡದ ಕೊಹ್ಲಿ ಟೀಂ ಇಂಡಿಯಾಗೆ 2-1 ಅಂತರದಿಂದ ಜಯಿಸುವ ಮೂಲಕ ಸರಣಿ ಗೆಲುವಿನ ಬರವನ್ನು ನೀಗಿಸಿಕೊಂಡಿದ್ದಾರೆ.
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಲಂಕಾ ಭಾರತವನ್ನು 63 ರನ್ಗಳಿಂದ ಮಣಿಸಿದ್ದರೆ, ಕೊಲಂಬೋದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 278 ರನ್ಗಳ ಅಂತರದಿಂದ ಗೆಲುವು ಕಂಡಿತು. ಹೀಗಾಗಿ ಉಭಯ ತಂಡಗಳಿಗೆ ಮೂರನೇ ಪಂದ್ಯ ನಿರ್ಣಾಯಕವಾಗಿತ್ತು. ಆದರೆ ಕೊನೆಯ ಟೆಸ್ಟ್ ಮೊದಲ ದಿನ ಭರ್ಜರಿ ಮಳೆ ಸುರಿದ ಕಾರಣ ಪಂದ್ಯ ಫಲಿತಾಂಶದಲ್ಲಿ ಅಂತ್ಯಗೊಳ್ಳುತ್ತದೋ ಅಥವಾ ಡ್ರಾ ಆಗುತ್ತದೋ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿತ್ತು. ಆದರೆ ಟೀಂ ಇಂಡಿಯಾದ ಆಟಗಾರರು ಉತ್ತಮವಾಗಿ ಆಡುವ ಮೂಲಕ ಮೂರನೇ ಪಂದ್ಯವನ್ನು ಜಯಗಳಿಸಿ ಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾದರು.
