ಕರಾವಳಿ

ಅನಿಲ ಟ್ಯಾಂಕರ್ ಪಲ್ಟಿ; ಬೆಂಕಿಗೆ ಮಹಿಳೆ, 9 ಹಸು ಬಲಿ; ಅಘವಡದಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯ

Pinterest LinkedIn Tumblr

karavara

ಕಾರವಾರ: ರಾಷ್ಟ್ರೀಯ ಹೆದ್ದಾರಿ-17ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅನಿಲ ಟ್ಯಾಂಕರ್ ಉರುಳಿ ಬಿದ್ದು, ಅನಿಲ ಸೋರಿಕೆಯಿಂದುಂಟಾದ ಬೆಂಕಿಗೆ ಒಬ್ಬ ಮಹಿಳೆ ಮೃತಪಟ್ಟು, 9 ಹಸುಗಳು ಬಲಿಯಾಗಿದ್ದು, 14 ಮಂದಿ ಗಾಯಗೊಂಡ ದುರ್ಘಟನೆ ಕುಮಟಾ ತಾಲ್ಲೂಕಿನ ಬರ್ಗಿ ಗ್ರಾಮದ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಮಂಗಳೂರಿನಿಂದ ಸೊಲ್ಲಾಪುರಕ್ಕೆ ಹೋಗುತ್ತಿದ್ದ ಅನಿಲ ಟ್ಯಾಂಕರ್‌ ಬೆಳಿಗ್ಗೆ 6ರ ಸುಮಾರಿಗೆ ಕಂದಕಕ್ಕೆ ಉರುಳಿದೆ. ಬಳಿಕ ಟ್ಯಾಂಕರ್‌ನಿಂದ ಅಪಾರ ಪ್ರಮಾಣದಲ್ಲಿ ಅನಿಲ ಸೋರಿಕೆಯಾಗಿದೆ. ಸಮೀಪದ ಮನೆಯಲ್ಲಿ ಗ್ಯಾಸ್‌ ಸ್ಟೌ ಹಚ್ಚಲು ಹೋದಾಗ ಬೆಂಕಿ ಹೊತ್ತಿಕೊಂಡಿದೆ. ಅಲ್ಲದೇ ಅದರ ಜ್ವಾಲೆ ಸುಮಾರು 9ಕ್ಕೂ ಹೆಚ್ಚು ಮನೆಗಳಿಗೆ ವ್ಯಾಪಿಸಿದ ಪರಿಣಾಮ ಒಟ್ಟು 14 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಉಡುಪಿ ಜಿಲ್ಲೆಯ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಂಬತ್ತು ಹಸುಗಳು ಸಹ ಅಸುನೀಗಿವೆ.

ಸ್ಫೋಟಗೊಳ್ಳದಂತೆ ಮುಂಜಾಗ್ರತಾ ಕ್ರಮ: ಹೆದ್ದಾರಿ ಬದಿಯ ಕಂದಕಕ್ಕೆ ಉರುಳಿರುವ ಟ್ಯಾಂಕರ್‌ ಸ್ಫೋಟಗೊಳ್ಳದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಅಗ್ನಿಶಾಮಕ ತುರ್ತು ಸೇವೆಯ ನಾಲ್ಕು ವಾಹನಗಳು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಮಂಗಳೂರಿನಿಂದ ಭಾರತ್‌ ಗ್ಯಾಸ್‌ ಲಿಮಿಟೆಡ್‌ ಸಂಸ್ಥೆಯ ತಜ್ಞರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ವಾಹನ ಸಂಚಾರ ಅಡೆತಡೆ: ಟ್ಯಾಂಕರ್‌ ಸ್ಫೋಟಗೊಳ್ಳುವ ಸಾಧ್ಯತೆ ಇರುವುದರಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಘಟನಾ ಸ್ಥಳದ ಸಮೀಪವೇ ಕೊಂಕಣ ರೈಲು ಹಳಿ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನೂ ಸಹ ನಿಲುಗಡೆ ಮಾಡಿಸಲಾಗಿದೆ.

ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌. ಪ್ರಸನ್ನ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ದೇವರಾಜ್‌ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

‘ಟ್ಯಾಂಕರ್‌ನೊಳಗೆ ಉಷ್ಣತೆ ಜಾಸ್ತಿಯಾಗಬಾರದು ಎನ್ನುವ ಕಾರಣದಿಂದ ನಿರಂತರವಾಗಿ ನೀರು ಹಾಯಿಸಲಾಗುತ್ತಿದೆ. ಮಂಗಳೂರಿನಿಂದ ಭಾರತ್‌ ಗ್ಯಾಸ್‌ ಕಂಪೆನಿಯ ತಜ್ಞರು ಸಹ ಸ್ಥಳಕ್ಕೆ ಆಗಮಿಸುತ್ತಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌. ಪ್ರಸನ್ನ ಅವರು ಮಾಹಿತಿ ನೀಡಿದರು.

Write A Comment