ಕನ್ನಡ ವಾರ್ತೆಗಳು

ಒಎನ್‌ಜಿಸಿ ಅಂಗಸಂಸ್ಥೆ ಎಂಆರ್‌ಪಿಎಲ್ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 406 ಕೋ.ರೂ. ಲಾಭ : ಅಧ್ಯಕ್ಷ ಡಿ.ಕೆ.ಸರಾಫ್

Pinterest LinkedIn Tumblr

MRPL_Press_Meet_1

ಮಂಗಳೂರು, ಆ.10: ಒಎನ್‌ಜಿಸಿ ಅಂಗಸಂಸ್ಥೆ ಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) 2015-16ನೆ ಸಾಲಿನ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 406 ಕೋ. ರೂ. ಲಾಭಗಳಿಸಿದೆ ಎಂದು ಎಂಆರ್‌ಪಿಎಲ್‌ನ ಅಧ್ಯಕ್ಷ ಡಿ.ಕೆ.ಸರಾಫ್ ತಿಳಿಸಿದ್ದಾರೆ.

ಬಾನುವಾರ ಎಂಆರ್‌ಪಿಎಲ್‌ನ 27 ವಾರ್ಷಿಕ ಮಹಾಸಭೆಯ ಬಳಿಕ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷದ ಪ್ರಥಮ ತ್ರೈಮಾಸಿಕ ಅವಧಿ ಯಲ್ಲಿ ಎಂಆರ್‌ಪಿಎಲ್ 36 ಕೋ.ರೂ. ನಷ್ಟ ದಲ್ಲಿತ್ತು. ಪ್ರಸಕ್ತ ವರ್ಷದಲ್ಲಿ ಕಚ್ಚಾ ತೈಲದ ಬೆಲೆ ಯಲ್ಲಿ ಏರಿಕೆಯಾಗಿದ್ದರೂ ಸಂಸ್ಕರಣಗೊಂಡ ತೈಲದ ಬೆಲೆಯಲ್ಲಿಯೂ ಏರಿಕೆಯಾಗಿದೆ. ಕಳೆದ ಬಾರಿ 3.20 ಮಿಲಿಯನ್ ಮೆಟ್ರಿಕ್ ಟನ್ ಉತ್ಪನ್ನಗಳಿಸಲು ಸಾಧ್ಯವಾಗಿದ್ದರೆ, ಈ ಬಾರಿ 3.89ಮಿಲಿಯನ್ ಮೆಟ್ರಿಕ್‌ಟನ್ ಕಚ್ಚಾ ತೈಲವನ್ನು ಸಂಸ್ಕರಿಸಿರುವುದರಿಂದ ಈ ನಷ್ಟವನ್ನು ಸರಿದೂಗಿಸಿ ಸಂಸ್ಥೆ ಲಾಭಗಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

MRPL_Press_Meet_2

ಕಳೆದ 2013-14ನೆ ಸಾಲಿನಲ್ಲಿ 14.55 ಎಂಎಂಟಿಯ ಸಾಧನೆಗೂ ಮೀರಿ ಹಿಂದೆಂದೂ ಕಾಣದ 14.65 ಎಂಎಂಟಿಯ ಕಚ್ಚಾ ತೈಲ ಸಂಸ್ಕರಣೆಯ ಸಾಧನೆಯನ್ನು ಪ್ರಸಕ್ತ 2014-15ನೆ ಸಾಲಿನಲ್ಲಿ ಸಾಧಿಸಲಾಗಿದೆ. ಎಲ್‌ಪಿಜಿಯ ಉತ್ಪಾದನೆ ಯಲ್ಲಿ ಹಿಂದಿನ ಸಾಲಿನ 497.6 ಟಿಎಂಟಿಯ ಸಾಧನೆಗೂ ಮೀರಿ ಪ್ರಸಕ್ತ ವರ್ಷ 2014-15ನೆ ಸಾಲಿನಲ್ಲಿ 502.4 ಟಿಎಂಟಿ ಉತ್ಪಾದನೆಯನ್ನು ಸಾಧಿಸಲಾಗಿದೆ. ಎಚ್‌ಎಸ್‌ಡಿ ಉತ್ಪಾದನೆಯು 2014-15ನೆ ಸಾಲಿನಲ್ಲಿ 5.68ಎಂಎಂಟಿ ಆಗಿದ್ದು, ಇದು ಕಳೆದ ವರ್ಷದ 5.50ಎಂಎಂಟಿ ಸಾಧನೆ ವೃದ್ಧಿಯನ್ನು ಕಂಡಿದೆ. ಪಿಎಚ್‌ಎಂಬಿಎಲ್ ಪೈಪ್ ಲೈನ್ ಮೂಲಕ 2014-15ನೆ ಸಾಲಿನಲ್ಲಿ 5.68 ಎಂಎಂಟಿ ಆಗಿದ್ದು, 5.50 ಎಂಎಂಟಿಯಾಗಿತ್ತು ಎಂದು ಸರಾಫ್ ತಿಳಿಸಿದ್ದಾರೆ.

ಇರಾನ್‌ನಲ್ಲಿ ನ್ಯೂಕ್ಲಿಯರ್ ಡೀಲ್ ಚೌಕಟ್ಟಿನ ಬೆಳವಣಿಗೆಯಿಂದ ಇರಾನ್‌ನಿಂದ ಕಚ್ಚಾತೈಲವನ್ನು ಆಮದು ಮಾಡಿ ಲಾಭಗಳಿಸುವ ಅವಕಾಶ ಹೆಚ್ಚಿದೆ. ತೈಲ ಬೆಲೆಯ ಕುಸಿತದಿಂದ ಒಎಂಸಿಗಳಿಂದ ಆದಾಯ ಕಡಿಮೆಯಾಗುವ ಕಾರಣ ಕಂಪೆನಿ ರಿಟೈಲ್ ಮಾರುಕಟ್ಟೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಚಿಂತಿಸಿದೆ. ಕಂಪೆನಿಯ 3ನೆ ಘಟಕ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು ಪೊಲಿಪ್ರೋಫಿಲಿನ್ ಘಟಕ ಉತ್ಪಾದನೆಯನ್ನು ಆರಂಭಿಸಿದೆ.

MRPL_Press_Meet_3

ಭಾರತ ಸರಕಾರದ ಅಟೋ ತೈಲ ನೀತಿಯ ಪ್ರಕಾರ ಕಂಪೆನಿ ಯುರೋ-4 ಶ್ರೇಣಿಯ ತೈಲ ಉತ್ಪಾದನೆಯಲ್ಲಿ ತೊಡಗಿದ್ದು, ತೈಲೋತ್ಪನ್ನವನ್ನು ಮಾರುಕಟ್ಟೆಗೆ ಯಶಸ್ವಿಯಾಗಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ಕಳೆದ ಎಪ್ರಿಲ್ 5ರಂದು 1,800 ಕೋ.ರೂ. ವೆಚ್ಚದ ಪಾಲಿಪ್ರೋಫಿಲಿನ್ ಘಟಕವನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸಿದ್ದಾರೆ. ಸಂಸ್ಥೆಯ ವತಿಯಿಂದ ಶೀಘ್ರದಲ್ಲಿ 100 ರಿಟೈಲ್ ಮಾರುಕಟ್ಟೆ ವಿಭಾಗಗಳನ್ನು ಸದ್ಯದಲ್ಲಿ ತೆರೆಯುವ ಯೋಜನೆಯನ್ನು ಹೊಂದಿದೆ. ಶೀಘ್ರದಲ್ಲಿ ಯುರೋ-5 ಮತ್ತು ಯುರೋ-6ಶ್ರೇಣಿಯ ತೈಲವನ್ನು ದೇಶಕ್ಕೆ ಬಿಡುಗಡೆ ಮಾಡುವ ಹೂಡಿಕೆ ಯೋಜನೆಯನ್ನು ಹಮ್ಮಿಕೊಂಡಿದೆ. ಎಂಆರ್‌ಪಿಎಲ್‌ನ ಕೋಕ್ ಸಲ್ಫರ್ ಘಟಕದ ಬಗ್ಗೆ ಸರಕಾರ ಜನಪ್ರತಿನಿಧಿಗಳು ಸೇರಿದಂತೆ ಸಮಿತಿಯೊಂದನ್ನು ರಚಿಸಲು ಆದೇಶಿಸಿದೆ ಎಂದು ತಿಳಿಸಿದರು.

ಒಎಂಪಿಎಲ್ ಸಂಸ್ಥೆಯನ್ನು ಎಂಆರ್‌ಪಿಎಲ್ ಸಂಸ್ಥೆಯೊಂದಿಗೆ ವಿಲೀನಗೊಳಿಸುವ ಯೋಜನೆ ಆರಂಭಗೊಂಡಿದೆ. ಈ ಬಗ್ಗೆ ಸರಕಾರಕ್ಕೆ ಅನುಮೋದನೆಗಾಗಿ ಪ್ರಸ್ತಾಪವನ್ನು ಕಳುಹಿಸಲಾಗಿದೆ. ಎಂಆರ್‌ಪಿಎಲ್ ಕಚ್ಚಾ ತೈಲದ ಸರಬರಾಜಿಗೆ ಮುಂಬೈಯ ಬಾಂಬೆ ಹೈ ಹಾಗೂ ರವಾ ಆಯಿಲ್ ಫೀಲ್ಡ್ ಜೊತೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಸರಾಫ್ ತಿಳಿಸಿದರು.

MRPL_Press_Meet_4

ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಎಚ್.ಕುಮಾರ್, ನಿರ್ದೇಶಕರಾದ ವಿಷ್ಣು ಅಗರ್‌ವಾಲ್, ಎಂ.ವೆಂಕಟೇಶ್, ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Write A Comment