ಕಾಸರಗೋಡು, ಆ.6: ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ತೆಕ್ಕಿಲ್ ಬಳಿ ಬುಧವಾರ ಮಧ್ಯಾಹ್ನ ನಡೆದ ಖಾಸಗಿ ಬಸ್ ಮತ್ತು ಲಾರಿ ಅಪಘಾತದಲ್ಲಿ ಒರ್ವ ಮಹಿಳೆ ಗಂಭೀರವಾಗಿ ಗಾಯಗೊಂಡು, ಇತರ 20 ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಮಹಿಳೆಯೋರ್ವರ ಸ್ಥಿತಿ ಗಂಭೀರವಾಗಿದೆ. ಬಸ್ಸಿನಲ್ಲಿದ್ದ ಚಟ್ಟಂಚಾಲ್ನ ಜಮೀಲಾ(44) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಪತಿ ಇಬ್ರಾಹೀಂ(51), ಸಹೋದರಿ ಮರಿಯಮ್ಮಾಬಿ(38), ಬಸ್ ಚಾಲಕ ನೀರ್ಚಾಲ್ನ ನಾರಾಯಣ(45), ಚಟ್ಟಂಚಾಲ್ನ ಶಹಿಮಾ (22), ಬಸ್ ಸಿಬ್ಬಂದಿ ಅಚ್ಯುತ(51), ಬೇವಿಂಜೆಯ ಇಬ್ರಾಹೀಂ(55), ಕಾಸರಗೋಡಿನ ಸಾವಿತ್ರಿ(40), ಕೋಟಿಕುಳಂನ ಹುಸೈನ್(48), ನಾಯಮ್ಮರಮೂಲೆಯ ಅಹ್ಮದ್(52), ಅಬ್ದುಲ್ಲಾ(40) ಮತ್ತು ಅಬ್ದುರ್ರಹಾನ್(45) ಸೇರಿದಂತೆ 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಮಂಗಳೂರು, ಕಾಸರಗೋಡಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಲಾರಿ ಚಾಲಕ ಮತ್ತು ಕ್ಲೀನರ್ ಕೂಡಾ ಗಾಯಗೊಂಡಿದ್ದಾರೆ .
ಬುಧವಾರ ಮಧ್ಯಾಹ್ನ ಕಾಸರಗೋಡ್ನಿಂದ ಕಾಞಂಗಾಡ್ಗೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಕಾಸರಗೋಡು ಕಡೆಗೆ ಹೋಗುತ್ತಿದ್ದ ಲಾರಿಯ ನಡುವೆ ಅಪಘಾತ ಸಂಭವಿಸಿದೆ. ಬಸ್ ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಹಾಗೂ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಿದರು. ಅಪಘಾತದ ಬಳಿಕ ಕಾಸರಗೋಡು ಕಾಞಂಗಾಡ್ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೂ ಗಂಟೆಗೂ ಅಧಿಕ ಸಮಯ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ

