ಮಂಗಳೂರು, ಜು. 29: ದ.ಕ. ಜಿಲ್ಲೆಯಲ್ಲಿ ಮೀಟರ್ ಬಡ್ಡಿಯ ಮೂಲಕ ಜನರನ್ನು ಸುಲಿಗೆ ನಡೆಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಂಗಳೂರು ಪೊಲೀಸ್ ಆಯುಕ್ತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಜಿಪಂ ಸಭಾಂಗಣದಲ್ಲಿ ಇಂದು ಹಿರಿಯ ಅಧಿಕಾರಿಗಳ ಜತೆಗಿನ ಚರ್ಚೆಯ ಸಂದರ್ಭ ಬ್ಯಾಂಕ್‌ಗಳು ಯಾವುದೇ ರೀತಿಯಲ್ಲಿ ಸಾಲಗಾರರಿಗೆ ಮರುಪಾವತಿಗೆ ಸತಾಯಿಸಬಾರದು ಎಂದು ತಾಕೀತು ಮಾಡಿದರು. ಬಡ್ಡಿ ಸಾಹುಕಾರರಿಂದ ಜನರಿಗೆ ಆಗುವ ತೊಂದರೆಗಳನ್ನು ತಪ್ಪಿಸುವ ಸಲುವಾಗಿ ಸಹಕಾರಿ ಬ್ಯಾಂಕ್‌ಗಳಿಗೆ ಒತ್ತು ನೀಡಲಾಗಿದೆ. ಜಿಲ್ಲೆಯಲ್ಲಿ ಮೀಟರ್ ಬಡ್ಡಿದಾರರ ಸಮಸ್ಯೆ ಅಧಿಕವಾಗಿದೆ. ಅವರನ್ನು ಸಂಪೂರ್ಣವಾಗಿ ನಿಯಂತ್ರಿಸುವ ಕಾರ್ಯ ಆಗಬೇಕು ಎಂದರು.
ಮಂಗಳೂರು ನಗರದಲ್ಲಿ ಈ ಬಗ್ಗೆ ಈಗಾಗಲೇ ವ್ಯಾಪಕ ಪ್ರಚಾರ ನೀಡಲಾಗಿದ್ದು, 13 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಕಾನೂನು ಪ್ರಕಾರ ಸಾಲ ನೀಡಿ ಬಡ್ಡಿ ಪಡೆಯುವವರಿಗೂ ಸೂಚನೆ ನೀಡಲಾಗಿದೆ. ಕಾನೂನು ಬಾಹಿರವಾಗಿ ಇಂತಹ ಕೃತ್ಯ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ಸಾಲ ಪಡೆದುದಕ್ಕೆ ಸಂಬಂಧಿಸಿ ಕಿರುಕುಳ ಅಥವಾ ಹಿಂಸೆಯ ಕುರಿತು ಈವರೆಗೆ ಯಾವುದೇ ದೂರು ಬಂದಿಲ್ಲ. ಈಗಾಗಲೇ ರೈತರ ಜತೆ ನಾವಿದ್ದೇವೆ ಎಂಬ 3,000ಕ್ಕೂ ಅಧಿಕ ಕರಪತ್ರಗಳ ಮೂಲಕ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಅಧಿಕ ಬಡ್ಡಿ ಪಡೆಯುವುದಕ್ಕೆ ಸಂಬಂಧಿಸಿ 6 ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ತಿಳಿಸಿದರು.
ಮುತ್ತೂಟ್, ಮಣಪ್ಪುರಂ ಸಂಸ್ಥೆಗಳ ಬಗ್ಗೆಯೂ ಗಮನ ಹರಿಸಿ: ಸಚಿವ ಖಾದರ್
ಮುತ್ತೂಟ್‌ಹಾಗೂ ಮಣಪ್ಪುರಂನಂತಹ ಸಂಸ್ಥೆಗಳು ಆರ್‌ಬಿಐ ನಿಯಮಾವಳಿಯನ್ನು ಪಾಲಿಸುತ್ತಿವೆಯೇ ಎಂಬುದನ್ನು ಜಿಲ್ಲಾಧಿಕಾರಿ ಗಮನ ಹರಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ನಿರ್ದೇಶಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ತೀರ್ಮಾನದಿಂದಾಗಿ ಇದೀಗ ಮೀಟರ್ ಬಡ್ಡಿದಾರರು ಭಯಪಡುವಂತಾಗಿದೆ. ಗ್ರಾಮೀಣ ಪ್ರದೇಶಗಳ ಬಹಳಷ್ಟು ಮಂದಿ ಇಂತಹ ಹಣಕಾಸು ಸಂಸ್ಥೆಗಳಲ್ಲಿ ಕಿವಿಯೋಲೆ, ಕರಿಮಣಿ ಮೊದಲಾದ ಅಮೂಲ್ಯವಾದ ಆಭರಣಗಳನ್ನು ಇರಿಸಿ ಸಾಲ ಪಡೆದಿರುತ್ತಾರೆ. ಆದರೆ ಕೊನೆಗೆ ಅಧಿಕ ಬಡ್ಡಿಯಿಂದಾಗಿ ಬಡವರು ತಮ್ಮ ಇದ್ದ ಅಲ್ಪಸ್ವಲ್ಪ ಚಿನ್ನವನ್ನೂ ಕಳೆದುಕೊಂಡು ಕಂಗಾಲಾಗುವ ಪರಿಸ್ಥಿತಿ ಇರುವುದರಿಂದ ಆರ್‌ಬಿಐ ವ್ಯಾಪ್ತಿಗೊಳಪಡುವ ಸಂಸ್ಥೆಗಳ ಬಗ್ಗೆಯೂ ನಿಗಾ ಇರಿಸಿ ಸೂಚನೆ ನೀಡುವ ಕೆಲಸವಾಗಲಿ ಎಂದು ಖಾದರ್ ಹೇಳಿದರು.
ಸರ್ವಿಸ್ ರಸ್ತೆಗಳ ಬಗ್ಗೆ ಗಮನ ಹರಿಸಿ:
ರಾಷ್ಟ್ರೀಯ ಹೆದ್ದಾರಿ ಇಲಾಖೆಯು ರಸ್ತೆ ಕಾಮಗಾರಿಗಳ ಸಂದರ್ಭ ಸರ್ವಿಸ್ ರಸ್ತೆಗಳಿಗೆ ಗಮನವನ್ನೇ ನೀಡುವುದಿಲ್ಲ. ಇದರಿಂದ ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದನ್ನು ಇನ್ನು ಯಾವುದೇ ರೀತಿಯಲ್ಲಿ ಸಹಿಸಲಾಗದು. ಸರ್ವಿಸ್ ರಸ್ತೆಯ ಹೊರತಾಗಿಯೂ ಟೋಲ್‌ಗೇಟ್ ಸಂಗ್ರಹಿಸುತ್ತಿರುವ ಏಕೈಕ ರಸ್ತೆ ಬಿ.ಸಿ.ರೋಡ್ ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಸಚಿವ ರೈ ತರಾಟೆಗೈದರು.
ತೊಕ್ಕೊಟ್ಟು, ಕಲ್ಲಾಪು, ಕೋಟೆಕಾರು, ಬೀರಿ, ಕೆ.ಸಿ.ರೋಡು, ತಲಪಾಡಿ, ಕುಂಪಲ ಜಂಕ್ಷನ್‌ಗಳಲ್ಲಿ ಯಾವುದೇ ಮುಂದಾಲೋಚನೆ ಇಲ್ಲದೆ ರಸ್ತೆ ಕಾಮಗಾರಿಗಳು ನಡೆದಿರುವುದರಿಂದ ಸಂಚಾರ ಅಸ್ತವ್ಯಸ್ತವಾಗುತ್ತಿದೆ ಎಂದು ಎನ್‌ಎಚ್ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಯು.ಟಿ.ಖಾದರ್, ಜನರ ಸುರಕ್ಷತೆಯ ಬಗ್ಗೆ ಕಾಳಜಿ ಅತೀ ಮುಖ್ಯ ಎಂದರು.
ಈ ಸಂದರ್ಭ ಶಾಸಕರಾದ ಜೆ.ಆರ್. ಲೋಬೊ, ಐವನ್ ಡಿಸೋಜ ವಿವಿಧ ಸಮಸ್ಯೆಗಳ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಜಿಪಂ ಅಧ್ಯಕ್ಷೆ ಆಶಾತಿಮ್ಮಪ್ಪ ಗೌಡ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ವರದಿ ಕೃಪೆ : ವಾಭಾ

