ಮಂಗಳೂರು: ಯು.ಎ.ಇ. ತುಳುಕೂಟ ದುಬಾಯಿ ಇದರ ರಜತ ಮಹೋತ್ಸವ ಸಮಾರಂಭವು 2015 ಅಕ್ಟೋಬರ್ 9ರಂದು ಶುಕ್ರವಾರ ದುಬಾಯಿ ಅಲ್‌ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಲಿದೆ. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ತುಳು, ಕನ್ನಡ, ಕೊಂಕಣಿ, ಬ್ಯಾರಿ ಭಾಷೆಯನ್ನಾಡುವ ತುಳುನಾಡಿನ ತುಳುವರು ಜಾತಿಮತ, ಭೇದ ಮರೆತು ಈ ಸಮಾರಂಭದಲ್ಲಿ ಸುಮಾರು ಮೂರು ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಯು.ಎ.ಇ. ತುಳುಕೂಟ ದುಬಾಯಿ ಸಂಘಟಕ ದಯಾ ಕಿರೋಡಿಯನ್ ಅವರು ತಿಳಿಸಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯು.ಎ.ಇ.ತುಳುಕೂಟ ದುಬಾಯಿ ತನ್ನ ಸುಧೀರ್ಘ ಹೆಜ್ಜೆಯಲ್ಲಿ ಆಚರಿಸುತ್ತಾ ಬಂದಿರುವ ತುಳು ಪರ್ಬ, ನಾಟಕ, ಯಕ್ಷಗಾನ, ಕ್ರೀಡಾಕೂಟ, ಸಮಾಜಸೇವೆ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಾಯಿನಾಡಿನಿಂದ ಹಲವಾರು ಗಣ್ಯರು, ಹಿರಿಯ, ಸಾಹಿತಿಗಳು, ಕಲಾವಿದರು, ಮಾರ್ಗದರ್ಶಕರು ಆಗಮಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಈ ಬಾರಿಯ 25ನೇ ವರ್ಷದ ರಜತ ಸಂಭ್ರಮವನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಡಾ.ಬಿ.ಆರ್.ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್ ಸಾಂಸ್ಕೃತಿಕ ಮನರಂಜನೆ ನೀಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನೂರ್ ಮೋಹನ್ ರೈ, ದೇವದಾಸ್ ಕಾಪಿಕಾಡ್ ಉಪಸ್ಥಿತರಿದ್ದರು.




