ಕನ್ನಡ ವಾರ್ತೆಗಳು

ಮಂಗಳೂರು ಚೈಲ್ಡ್‌ಲೈನ್‌ನಿಂದ ಸ್ವಯಂ ರಕ್ಷಣೆ ಬಗ್ಗೆ ಮಕ್ಕಳಿಗೆ ಮಾಹಿತಿ ಕಾರ್ಯಕ್ರಮ

Pinterest LinkedIn Tumblr

Child_line_photo_1

ಮಂಗಳೂರು, ಜುಲೈ.18  :ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್‌ಲೈನ್-1098 ಬಗ್ಗೆ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಕ್ಕಳ ಮೇಲಾಗುವ ದೌರ್ಜನ್ಯ ತಡೆ ಮತ್ತು ಸ್ವಯಂ ರಕ್ಷಣೆ ಎಂಬ ಕಾರ್ಯಕ್ರಮವನ್ನು  ನವಮಂಗಳೂರು ಬಂದರು ಮಂಡಳಿ ಪ್ರೌಢ ಶಾಲೆ ಪಣಂಬೂರುನಲ್ಲಿ ನಡೆಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಾಲಾ ಮುಖ್ಯೋಪಧ್ಯಾಯರಾದ ಶ್ರೀಮತಿ ಮೇರಿ ಡಿ’ಸೋಜರವರು ಮಾತನಾಡುತ್ತಾ ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಗುರುಹಿರಿಯರಿಗೆ ಗೌರವವನ್ನು ನೀಡಿ, ತಮ್ಮ ಕರ್ತವ್ಯ ಮತ್ತು ಜವಬ್ದಾರಿಗಳನ್ನು ಅರಿತು, ಜೀವನದಲ್ಲಿ ಉನ್ನತವಾದ ಗುರಿಯನ್ನಿಟ್ಟುಕೊಂಡು ಮುನ್ನಡೆಯಬೇಕೆಂದ ಅವರು ತಮ್ಮ ಪರಿಸರದಲ್ಲಿರುವ ಮಕ್ಕಳಿಗೆ ತೊಂದರೆಯಾದಾಗ ಮಕ್ಕಳ ಸಹಾಯವಾಣಿ ಚೈಲ್ಡ್‌ಲೈನ್-1098 ನ ಸಹಾಯವನ್ನು ಪಡೆದು ಮಕ್ಕಳ ರಕ್ಷಣೆಯನ್ನು ಮಾಡುವಂತೆ ಕರೆ ನೀಡಿದರು.

Child_line_photo_3 Child_line_photo_2

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಚೈಲ್ಡ್‌ಲೈನ್ ಮಂಗಳೂರು-1098ರ ನಗರ ಸಂಯೋಜನಾಧಿಕಾರಿಯಾದ ಶ್ರೀ ಯೋಗೀಶ್ ಮಲ್ಲಿಗೆಮಾಡುರವರು, ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಹಾಗೂ ಅವುಗಳಿಂದ ಮಕ್ಕಳು ಹೇಗೆ ಸ್ವರಕ್ಷಣೆಯನ್ನು ಮಾಡಿಕೊಳ್ಳಬೇಕು, ಹಾಗೂ ಸ್ವ-ರಕ್ಷಣೆಯ ವಿಧಾನಗಳು, ಸುರಕ್ಷಿತ ಸ್ಪರ್ಶ ಹಾಗೂ ಅಸುರಕ್ಷಿತ ಸ್ಪರ್ಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು, ಇಂದಿನ ದಿನಗಳಲ್ಲಿ ಅಪರಿಚಿತಗಿಂತ ಕುಟುಂಬದೊಳಗಿನ ಸಂಬಂಧಿಕರಿಂದಲೇ ಮಕ್ಕಳ ಮೇಲೆ ಹೆಚ್ಚು ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದ ಅವರು, ಮಕ್ಕಳ ಹಕ್ಕು ಕುರಿತು ಮಾಹಿತಿಯನ್ನು ನೀಡಿದರು.

ಹೆಣ್ಣು ಮಕ್ಕಳು ಹೇಗೆ ತಮ್ಮನ್ನು ತಾವು ಸ್ವ-ರಕ್ಷಣೆ ಮಾಡಿಕೊಳ್ಳಬೇಕು, ಯಾವ ರೀತಿ ಸಹಾಯವನ್ನು ಪಡೆಯಬೇಕು ಹಾಗೂ ತೊಂದರೆಗೊಳಗಾದ ತಮ್ಮ ಆಪ್ತ ವಲಯದಲ್ಲಿ ಯಾರನ್ನೆಲ್ಲ ಗುರುತಿಸಿಕೊಂಡಿರಬೇಕು ಎಂಬುದರ ಬಗ್ಗೆ ಸದಸ್ಯರಾದ ಶ್ರೀಮತಿ ರೇವತಿ ಹೊಸಬೆಟ್ಟು ಮತ್ತು ಶ್ರೀಮತಿ ಅಸುಂತ ಡಿಸೋಜರವರು ಮಾಹಿತಿಯನ್ನು ನೀಡಿದರು.

Child_line_photo_5 Child_line_photo_4

ಸದಸ್ಯರಾದ ಶ್ರೀ ನಾಗಾರಾಜ್ ಪಣಕಜೆರವರು ಮಕ್ಕಳ ಸಹಾಯವಾಣಿ ಎಂಬ ಧ್ಯೇಯ ಗೀತೆಯನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟರು. ಹಾಗೂ ದೂರವಾಣಿ ಮೂಲಕ ಮಕ್ಕಳ ರಕ್ಷಣಾ ಸೇವೆಯಲ್ಲಿ ದಿನದ 24 ಗಂಟೆಯೂ ತೊಡಗಿಕೊಂಡಿರುವ ಚೈಲ್ಡ್‌ಲೈನ್ -1098 ಇದರ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿಯನ್ನು ನೀಡಿದರು. ತಮ್ಮ ಪರಿಸರದಲ್ಲಿ ಮಕ್ಕಳಿಗೆ ಸಮಸ್ಯೆಯಾದಗ ಕರೆಯನ್ನು ಮಾಡಿ ಸಹಕರಿಸುವಂತೆ, ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಚೈಲ್ಡ್‌ಲೈನ್-1098ಗೆ ದೂರವಾಣಿ ಕರೆಯನ್ನು ಮಾಡಿ ಮಕ್ಕಳ ರಕ್ಷಣೆಯಲ್ಲಿ ತೊಡಗಿಕೊಳ್ಳುವಂತೆ ತಿಳಿಸಿದರು.

ಮಹಿಳೆ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಹಾಗೂ ಹಿಂಸೆಗಳ ತಡೆ ಬಗ್ಗೆ ಸದಸ್ಯೆಯಾದ ಕು|| ಪವಿತ್ರ ಜ್ಯೋತಿಗುಡ್ಡೆಯವರು ಬ್ಲೂ ರಿಬ್ಬನ್ ಎಂಬ ಏಕವ್ಯಕ್ತಿ ಪ್ರಹಸನವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಚೈಲ್ಡ್‌ಲೈನ್-1098ರ ಕೇಂದ್ರ ಸಂಯೋಜನಾಧಿಕಾರಿ ಸಂಪತ್ತ್ ಕಟ್ಟಿ ಹಾಗೂ ಶಾಲಾ ಶಿಕ್ಷಕರುಗಳು ಬಾಗವಹಿಸಿದ್ದರು. ಶಾಲಾ ಮುಖ್ಯೋಪಧ್ಯಾಯರಾದ ಶ್ರೀಮತಿ ಮೇರಿ ಡಿ’ಸೋಜರವರು ಸ್ವಾಗತಿಸಿ, ವಂದಿಸಿದರು. ರೇಡಿಯೋ ಪಾರ್ಟ್‌ನರ್ 92.7 ಬಿಗ್.ಎಫ್.ಎಮ್ ಸಹಕಾರವನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು 270 ಮಕ್ಕಳು ಭಾಗವಹಿಸಿದ್ದರು.

Write A Comment