ಬೆಂಗಳೂರು, ಜು.18: ಬಾಹುಬಲಿ ಹಾಗೂ ಹ್ಯಾಪಿ ನ್ಯೂ ಇಯರ್ ಚಿತ್ರಗಳ ದಾಖಲೆ ಮುರಿಯಲು ಸಾಧ್ಯವಾಗದಿದ್ದರೂ ಭಾರತೀಯ ಚಿತ್ರ ರಸಿಕರ ಮನ ಗೆಲ್ಲುವಲ್ಲಿ ಬ್ಯಾಡ್ ಬಾಯ್ ಸಲ್ಲು ಅಭಿನಯದ ಭಜರಂಗಿ ಭಾಯಿಜಾನ್ ಯಶಸ್ವಿಯಾಗಿದೆ.
ಫ್ರೆಂಚ್ ಭಾಷೆ ಸೇರಿದಂತೆ ಪಂಚ ಭಾಷೆಗಳಲ್ಲಿ ತೆರೆ ಕಂಡಿರುವ ಪ್ರಭಾಸ್ ನಾಯಕತ್ವದ ಬಾಹುಬಲಿ ಚಿತ್ರ ಮೊದಲ ದಿನದ ಪ್ರದರ್ಶನದಲ್ಲಿ 50 ಕೋಟಿ ರೂ. ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಮೊದಲ ದಿನದ ಗಳಿಕೆಯಲ್ಲಿ ಹ್ಯಾಪಿ ನ್ಯೂ ಇಯರ್ ಚಿತ್ರ ದಾಖಲೆ ನಿರ್ಮಿಸಿತು. ಆ ದಾಖಲೆಯನ್ನು ಬಾಹುಬಲಿ ಚಿತ್ರ ಮುರಿಯುತ್ತಿದ್ದಂತೆ ಭಾಯಿಜಾನ್ ಚಿತ್ರ ಆ ದಾಖಲೆಯನ್ನು ಮುರಿಯಲಿದೆ ಎಂಬುದು ಸಿನಿ ರಸಿಕರ ಅಭಿಪ್ರಾಯವಾಗಿತ್ತು. ಆದರೆ ಭಾಯಿಜಾನ್ ಚಿತ್ರ ಮೊದಲ ದಿನದಂದೇ ಸುಮಾರು 30 ಕೋಟಿ ರೂ. ಗಳಿಸುವ ಮೂಲಕ ಪಿಕೆ ಮತ್ತು ಕಿಕ್ ಚಿತ್ರದ ದಾಖಲೆಯನ್ನು ಮಾತ್ರ ಮುರಿಯುವಲ್ಲಿ ಯಶಸ್ವಿಯಾಗಿದೆ. ಪ್ರೀತಿ, ದೇಶಭಕ್ತಿ ಹಾಗೂ ಧಾರ್ಮಿಕತೆಯನ್ನು ಸಮೀಕರಿಸಿ ತಯಾರಿಸಲಾಗಿರುವ ಭಾಯಿಜಾನ್ ಚಿತ್ರರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ದೇಶ, ವಿದೇಶ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಭಾಯಿಜಾನ್ಗೆ ಚಿತ್ರರಸಿಕರು ಫಿದಾ ಆಗಿದ್ದಾರೆ. ತನ್ನ ಜೀವನ ರೂಪಿಸಿಕೊಳ್ಳುವ ಉದ್ದೇಶದಿಂದ ಮಹಾನ್ ಹನುಮಾನ್ ಭಕ್ತ ದೆಹಲಿ ನಿವಾಸಿ ಪವನ್ ಚರ್ತುವೇದಿ(ಸಲ್ಮಾನ್ ಖಾನ್) ರಸಿಕಾ(ಕರೀನಾ ಕಪೂರ್)ಳನ್ನು ವರಿಸುತ್ತಾನೆ. ಇದ್ದಕ್ಕಿದಂತೆ ಒಂದು ದಿನ ಆಕಸ್ಮಿಕವಾಗಿ ಪಾಕಿಸ್ತಾನ ಮೂಲದ ಬಾಲಕಿಯೊಬ್ಬಳು ಪವನ್ಗೆ ಸಿಗುತ್ತಾಳೆ. ದಾರಿತಪ್ಪಿ ಭಾರತಕ್ಕೆ ಬಂದ ಆಕೆ ಬಳಿ ಪಾಸ್ಪೋರ್ಟ್ ಆಗಲಿ, ಅಧಿಕೃತ ವೀಸಾ ಇರೋದಿಲ್ಲ. ಆದರೂ ಭಾಯಿಜಾನ್ ಬಾಲಕಿಯನ್ನು ಮತ್ತೆ ತನ್ನ ತಾಯ್ನಾಡಿಗೆ ಕಳುಹಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಾನೆ. ನೆಲೆ ಕಳೆದುಕೊಂಡ ಬಾಲಕಿಯನ್ನು ತಾಯ್ನಾಡಿಗೆ ಸೇರಿಸುವ ಉದ್ದೇಶದಿಂದ ಪವನ್ ಸ್ಥಳೀಯ ಪತ್ರಕರ್ತರ ಸಹಾಯದೊಂದಿಗೆ ಪಾಕ್ಗೆ ತೆರಳಿದಾಗ, ಚಿತ್ರ ವೇಗ ಪಡೆದುಕೊಳ್ಳುತ್ತದೆ.
ಬಾಲಕಿಯನ್ನು ತಾಯ್ನಾಡಿಗೆ ಕಳುಹಿಸುವಲ್ಲಿ ಪವನ್ ನಡೆಸುವ ಸಾಹಸ ರೋಮಾಂಚಕವಾಗಿದೆ ಮಾತ್ರವಲ್ಲ ಪ್ರತಿಯೊಬ್ಬ ಭಾರತೀಯನ ಹೃದಯ ಕಲುಕುವಲ್ಲಿಯೂ ಯಶಸ್ವಿಯಾಗಿದೆ. ಪವನ್ ಪಾತ್ರದಲ್ಲಿ ಮಿಂಚಿರುವ ಸಲ್ಮಾನ್ ಖಾನ್ ಅಭಿನಯ ಬೊಂಬಾಟ್.
ಕೇವಲ ಸಲ್ಮಾನ್ ಖಾನ್ ಪತ್ನಿಯಾಗಿ ಚಿಕ್ಕ ಹಾಗೂ ಚೊಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕರೀನಾ ಮತ್ತು ಖಾನ್ ನಡುವಿನ ಕೆಮಿಸ್ಟ್ರಿ ವರ್ಕ್ಔಟ್ ಆಗಿದೆ.
ಬಾಲನಟಿಯಾಗಿ ನಟಿಸಿರುವ ಹಿಮಾಲಿ ಪಾತ್ರ ಚಿತ್ರ ರಸಿಕರ ಮನಗೆದ್ದಿದೆ. ಸಾಧಾರಣ ಕಥೆಯಾದರೂ ಚಿತ್ರಕಥೆ ಹೆಣೆಯುವಲ್ಲಿ ನಿರ್ದೇಶಕ ಕಬೀರ್ಖಾನ್ ಚಾಣಾಕ್ಷತನ ಮೆರೆದಿದ್ದಾರೆ. ಒಟ್ಟಾರೆ ಕಟ್ಟಾ ಹಿಂದೂವಾದಿಗಳ ವಿರೋಧ ನಡುವೆಯೂ ಶತ್ರು ರಾಷ್ಟ್ರದ ಬಾಲಕಿಗೆ ನೆರವು ನೀಡಲು ಮುಂದಾಗುವ ಹಿಂದೂ ಯುವಕನ ಸಾಹಸಗಾಥೆ ಬಾಲಿವುಡ್ನಲ್ಲಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ.
