ಅಂತರಾಷ್ಟ್ರೀಯ

ಇರಾಕ್‌ : ಆತ್ಮಾಹುತಿ ಕಾರ್ ಬಾಂಬ್‌ಗೆ 80ಕ್ಕೂ ಹೆಚ್ಚು ಜನ ಬಲಿ

Pinterest LinkedIn Tumblr

blast

ಬಾಗ್ದಾದ್, ಜು.18: ಪವಿತ್ರ ರಂಜಾನ್‌ಹಬ್ಬದ ಕೊನೆಯ ದಿನದ ಸಂಭ್ರಮದ ವೇಳೆ ಇರಾಕ್‌ನ ಪೂರ್ವ ಪ್ರಾಂತ್ಯದ ದಿಯಾಲಾದಲ್ಲಿ ಸಂಭವಿಸಿದ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟದಲ್ಲಿ 80ಕ್ಕೂ ಹೆಚ್ಚು ಜನರು ಮೃತಪಟ್ಟು 50ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಎಲ್ಲರನ್ನೂ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಹಿಂಸಾಕೃತ್ಯದ ಹೊಣೆಯನ್ನು ಇಸ್ಲಾಮಿಕ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಈ ಕುರಿತಂತೆ ಟ್ವೀಟ್ ಮೂಲಕ ಸಂದೇಶವೊಂದು ನಮಗೆ ತಲುಪಿದೆ ಎಂದು ಖಾನ್ ಬೇನಿಸಾದ್ ನಗರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ರಂಜಾನ್ ಕೊನೆಯ ದಿನವಾದ ಇಂದು ಮಾರುಕಟ್ಟೆಯಲ್ಲಿ ಭಾರೀ ಜನಸಂದಣಿ ಸೇರಿತ್ತು. ಮೃತರು ಹಾಗೂ ಗಾಯಾಳುಗಳಲ್ಲಿ ಹೆಂಗಸರು-ಮಕ್ಕಳು ಎಲ್ಲರೂ ಸೇರಿದ್ದಾರೆ.

ಇನ್ನೂ ಕೂಡ ಭಯೋತ್ಪಾದಕ ಕೃತ್ಯಗಳು ನಡೆಯುವ ಸಾಧ್ಯತೆಯಿರುವುದರಿಂದ ಎಲ್ಲ ಕಡೆ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಪ್ರಮುಖವಾಗಿ ಮಾರುಕಟ್ಟೆಗಳು, ದೊಡ್ಡ ದೊಡ್ಡ ಅಂಗಡಿಗಳು, ಮಸೀದಿಗಳ ಬಳಿ ಭದ್ರತೆ ಬಿಗಿಗೊಳಿಸಲಾಗಿದೆ. ದಿಯಾಲಾದ ಬಹುತೇಕ ಭಾಗಗಳನ್ನು ಇಸ್ಲಾಮಿಕ್ ಸಂಘಟನೆ (ಐಎಸ್) ಕಳೆದ ವರ್ಷ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. ನಂತರ ನಡೆದ ಸಮರದ ಬಳಿಕ ಸರ್ಕಾರಿ ಸೇನೆ ಈ ಭಾಗಗಳನ್ನು ಉಗ್ರರಿಂದ ಬಿಡಿಸಿಕೊಂಡಿತ್ತು.

Write A Comment