ಕರ್ನಾಟಕ

ರಾಜ್ಯದ ವಿವಿಧ ಭಾಗಗಳಲ್ಲಿ ಇಂದೂ 5 ಮಂದಿ ರೈತರು ಸಾವಿಗೆ ಶರಣು

Pinterest LinkedIn Tumblr

Former-suicid

ಬೆಂಗಳೂರು, ಜು.18: ರಾಜ್ಯದಲ್ಲಿ ಮತ್ತೆ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರೆದಿವೆ. ಸಾಲ ಬಾಧೆ ತಾಳಲಾರದೆ ಇಂದು ರಾಜ್ಯದ ವಿವಿಧ ಭಾಗಗಳಲ್ಲಿ ಐದು ಮಂದಿ ರೈತರು ಸಾವಿಗೆ ಕೊರಳೊಡ್ಡಿದ್ದಾರೆ.

ಒಂದೆಡೆ ಸರ್ಕಾರ ನಿಮ್ಮ ನೆರವಿಗೆ ಇದೆ ಎಂದು ಆತ್ಮಸ್ಥೈರ್ಯ ತುಂಬುತ್ತಿದ್ದರೂ ಆತ್ಮಹತ್ಯೆ ಸರಣಿ ಮುಂದುವರೆದಿರುವುದು ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇಂದು ತುಮಕೂರು ಮತ್ತು ಕಲಬುರುಗಿಯಲ್ಲಿ ನಾಲ್ಕು ಮಂದಿ ರೈತರು ಸಾಲ ಭಾದೆ, ಬೆಳೆ ನಷ್ಟ ಸೇರಿದಂತೆ ಮತ್ತಿತರ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಎಂ. ಕೃಷ್ಣ ಅವರು ಖುದ್ದು ರೈತರ ಮನೆಗಳಿಗೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಸಾಲು ಸಾಲು ಸರಣಿ ಆತ್ಮಹತ್ಯೆ ನಡೆಯುತ್ತಿರುವುದು ಸರ್ಕಾರ ಇನ್ನಷ್ಟು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಈ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಸರ್ಕಾರ ನಿಮ್ಮ ನೆರವಿಗೆ ಧಾವಿಸಲಿದೆ. ಎಲ್ಲ ಸಮಸ್ಯೆಗಳಿಗೂ ಆತ್ಮಹತ್ಯೆಯೇ ಪರಿಹಾರವಲ್ಲ ಎಂದು ಅನ್ನದಾತನಿಗೆ ಧೈರ್ಯ ತುಂಬಿದ್ದಾರೆ.
ತುಮಕೂರು ಜಿಲ್ಲೆಯಲ್ಲೇ ಕಳೆದ ಮಧ್ಯರಾತ್ರಿಯಿಂದ ಮೂವರು ರೈತರು ಸಾವಿಗೆ ಶರಣಾಗಿದ್ದಾರೆ. ತುಮಕೂರು ತಾಲೂಕಿನ ಕೋರಾ ಹೋಬಳಿಯ ನಂದಿಹಳ್ಳಿ ಗ್ರಾಮದ ಹಾಲಪ್ಪ (55) ಶಿರಾ ತಾಲೂಕು ಕಸಬಾ ಹೋಬಳಿಯ ಕುಮಾರಸ್ವಾಮಿ (53) ಹಾಗೂ ಗುಬ್ಬಿ ಕೋಣೆಮಾದೇನಹಳ್ಳಿ ಗ್ರಾಮದ ವೇದಮೂರ್ತಿ,ಕಲಬುರುಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾಜ್‌ಪುರ್ ಗ್ರಾಮದ ಮಾಣಿಕ್‌ರೆಡ್ಡಿ (48) ಎಂಬುವರು ಸಾವನ್ನಪ್ಪಿದ್ದಾರೆ. ತುಮಕೂರು ವರದಿ: ಶಿರಾ ತಾಲೂಕಿನ ಕಸಬಾ ಹೋಬಳಿಯ ಕುಮಾರಸ್ವಾಮಿ ಎಂಬ ರೈತ ತನ್ನ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದಿಬ್ಬಣ್ಣ-ವೇದಮ್ಮ ಅವರ ಕಿರಿಮಗ ಕುಮಾರಸ್ವಾಮಿ, ಕೆನರಾ ಬ್ಯಾಂಕ್ ಹಾಗೂ ಸ್ವಸಹಾಯ ಸಂಘಗಳಲ್ಲಿ 4 ರಿಂದ 5 ಲಕ್ಷ ಸಾಲ ಹಾಗೂ ಕೈ ಸಾಲ ಮಾಡಿಕೊಂಡಿದ್ದ. ಇತ್ತೀಚೆಗೆ ರಾಜ್ಯಾದ್ಯಂತ ರೈತರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸಾಲ ಕೊಟ್ಟವರು ಅಸಲು ನೀಡುವಂತೆ ಒತ್ತಡ ಹಾಕಿದ್ದರು ಎನ್ನಲಾಗಿದೆ. ಮೂರು ಎಕರೆ ಜಮೀನು ಹೊಂದಿದ್ದ ಇವರು 150 ತೆಂಗಿನ ಮರ, 350 ಅಡಿಕೆ ಮರವನ್ನು ತನ್ನ ಜಮೀನಿನಲ್ಲಿ ಬೆಳೆದಿದ್ದರು. ಸಾಲ ತೀರಿಸಲಾಗದೆ ಕಳೆದ ರಾತ್ರಿ ಅವರು ತನ್ನ ಹೊಲದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತ್ನಿ ಹಾಗೂ ಮಗುವನ್ನು ಆಗಲಿದ್ದಾರೆ. ಶಿರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ. ತುಮಕೂರಿನ ಕೋರಾ ಹೋಬಳಿ ನಂದಿಹಳ್ಳಿ ಗ್ರಾಮದ ಹಾಲಪ್ಪ (55) ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವ ಮತ್ತೋರ್ವ ನತದೃಷ್ಟ ರೈತ.

ಒಂದೂವರೆ ಎಕರೆ ಜಮೀನು ಹೊಂದಿರುವ ಈತ 4.5 ಲಕ್ಷ ಸಾಲ ಮಾಡಿಕೊಂಡಿದ್ದ. ಸಾಲಕ್ಕೆ ಹೆದರಿ ತನ್ನ ಜಮೀನಿನಲ್ಲೇ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತಿ ಮನೆಗೆ ಬಾರದಿದ್ದರಿಂದ ಪತ್ನಿ ಇಂದಿರಮ್ಮ ಹೊಲಕ್ಕೆ ಹೋದಾಗ ಪ್ರಕರಣ ಬಯಲಿಗೆ ಬಂದಿದೆ. ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಕೋಣೆ ಮಾದನಹಳ್ಳಿ ನಿವಾಸಿ ವೇದಮೂರ್ತಿ ಎಂಬ ರೈತ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಂದೆ ಶಿವಣ್ಣ ಮತ್ತು ಶಿವಮ್ಮ ಪುತ್ರರಾದ ಇವರ ಮೇಲೆ ಸಂಸಾರದ ಹೊಣೆಗಾರಿಕೆ ಇತ್ತು.
ನಾಲ್ಕು ಎಕರೆ ಜಮೀನಿನಲ್ಲಿ ಅಡಿಕೆ, ತೆಂಗು, ಬಾಳೆ ಬೆಳೆದುಕೊಂಡಿದ್ದಾರೆ. ಕೃಷಿ ಮಾಡಿಕೊಂಡಿದ್ದ ರೈತ ಕಾವೇರಿ ಗ್ರಾಮೀಣ ಬ್ಯಾಂಕ್ , ಧರ್ಮಸ್ಥಳ ಸಹಕಾರಿ ಬ್ಯಾಂಕ್, ಎಸ್‌ಬಿಎಂನಿಂದಲೂ ಸಾಲ ಪಡೆದಿದ್ದ. ಕಳೆದ ಹಲವು ದಿನಗಳಿಂದ ಸಾಲ ಹಿಂತಿರುಗಿಸುವಂತೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದರಿಂದ ಹೆದರಿದ ವೇದಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಲಬುರಗಿ ವರದಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಜ್‌ಪುರ್ ಗ್ರಾಮದ ಮಾಣಿಕ್‌ರೆಡ್ಡಿ ಎಂಬ ಮತ್ತೋರ್ವ ರೈತ ಸಾವಿನ ಕುಣಿಕೆಗೆ ಕೊರಳೊಡ್ಡಿದ್ದಾನೆ. ಸಹಕಾರಿ ಬ್ಯಾಂಕ್‌ಗಳಲ್ಲಿ 1.80 ಲಕ್ಷ ಬೆಳೆ ಸಾಲ ಪಡೆದಿದ್ದ. ಸಾಲ ಹಿಂತಿರುಗಿಸುವಂತೆ ಒತ್ತಡ ಹಾಕಿದ್ದರಿಂದ ತನ್ನ ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Write A Comment