ಚೆನ್ನೈ: ತಮ್ಮ ಆರೋಗ್ಯದ ಕುರಿತಾಗಿ ಊಹಾತ್ಮಕ ಲೇಖನವನ್ನು ಪ್ರಕಟಿಸಿದೆ ಎಂಬ ಆರೋಪದ ಮೇಲೆ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಆನ್ಲೈನ್ ಪೋರ್ಟಲ್ ರೆಡಿಫ್.ಕಾಮ್( Rediff.com) ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ. ಜಯಾರವರ ಆರೋಗ್ಯ ಕೆಟ್ಟಿದೆ ಎಂದು ಜುಲೈ 10 ರಂದು ಪೋರ್ಟಲ್ ಎರಡು ಲೇಖನಗಳನ್ನು ಪ್ರಕಟಿಸಿತ್ತು.
ಸಿಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ಎಲ್ ಜೇಗನ್ ಚೆನ್ನೈನ ಪ್ರಧಾನ ಸೆಶನ್ಸ್ ನ್ಯಾಯಾಲಯದಲ್ಲಿ ಜಯಲಲಿತಾ ಪರವಾಗಿ ದೂರು ದಾಖಲಿಸಿದ್ದಾರೆ.
‘ಚೆನೈ ಮಾಧ್ಯಮಗಳಿಗೆ ಜಯಲಲಿತಾ ಆರೋಗ್ಯ ಉತ್ತಮವಾಗಿಲ್ಲ ಎಂಬ ಅರಿವಿದೆ, ಆದರೂ ಮೌನವಾಗಿವೆ,’ ಎಂಬ ಶೀರ್ಷಿಕೆಯುಳ್ಳ ಲೇಖನವನ್ನು ಜಯಾರವರ ವರ್ಚರ್ಸಿಗೆ ಕಳಂಕ ತರುವ ದುರುದ್ದೇಶದೊಂದಿಗೆ, ಸತ್ಯವನ್ನು ಸರಿಯಾಗಿ ಪರಿಶೀಲಿಸದೆ ಪ್ರಕಟಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಲೇಖಕ ರಾಮಸುಬ್ರಮಣಿಯನ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಸಂಪಾದಕ, ಸಹಾಯಕ ಸಂಪಾದಕ ಸೇರಿದಂತೆ ಐದು ಜನರ ವಿರುದ್ಧ ದೂರಿನಲ್ಲಿ ಆರೋಪಿಸಲಾಗಿದೆ.
ಒಂದೆರಡು ದಿನಗಳಲ್ಲಿ ಈ ಕುರಿತು ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಕಚೇರಿಯ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಜಯಲಲಿತಾ ತೀವ್ರ ಅಸ್ವಸ್ಥಗೊಂಡಿದ್ದಾರೆ ಎಂಬ ವದಂತಿ ಕಳೆದ ಕೆಲ ದಿನಗಳಿಂದ ತಮಿಳುನಾಡಿನಾದ್ಯಂತ ಹಬ್ಬಿದೆ. ಕಳೆದ ಕೆಲವು ದಿನಗಳಿಂದ ಅವರು ಯಾವುದೇ ಸಚಿವಾಲಯದ ಸಭೆ, ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಜಯಲಲಿತಾಗೆ ತೀವ್ರ ಅನಾರೋಗ್ಯ ಕಾಡುತ್ತಿದೆ. ಅವರಿಗೆ ಮೂತ್ರ ಪಿಂಡ ಅಥವಾ ಯಕೃತ್ತಿನ ಕಸಿ ನಡೆಸಬೇಕಂತೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ರೆಡಿಫ್.ಕಾಮ್ ಲೇಖನವನ್ನು ಪ್ರಕಟಿಸಿತ್ತು.