ನಟಿಯೊಬ್ಬರು ಡ್ರೆಸ್ ಚೇಂಜ್ ಮಾಡುವ ರೂಮಿನಲ್ಲಿ ಕಾಸ್ಟೂಮ್ ಸಹಾಯಕನೊಬ್ಬ ರೆಕಾರ್ಡಿಂಗ್ ಮಾಡ್ ನಲ್ಲಿ ತನ್ನ ಮೊಬೈಲ್ ಇಟ್ಟು ರಹಸ್ಯವಾಗಿ ರೆಕಾರ್ಡ್ ಮಾಡುತ್ತಿದ್ದು, ಈಗ ಸಿಕ್ಕಿ ಬಿದ್ದಿರುವ ಆತ ಪೊಲೀಸರ ಅತಿಥಿಯಾಗಿದ್ದಾನೆ.
ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಕಿರು ತೆರೆ ನಟಿಯೊಬ್ಬರು ಶೂಟಿಂಗ್ ಮುಗಿದ ಬಳಿಕ ಡ್ರೆಸ್ ಚೇಂಜ್ ಮಾಡಲೆಂದು ಡ್ರೆಸ್ಸಿಂಗ್ ರೂಮಿಗೆ ಬಂದಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಕಸದ ಬುಟ್ಟಿಯಲ್ಲಿ ಮೊಬೈಲ್ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಆಕಸ್ಮಾತ್ತಾಗಿ ಬೀಳಿಸಿಕೊಂಡಿರಬಹುದೆಂದು ಭಾವಿಸಿದ ಅವರು ಕೇಶ ವಿನ್ಯಾಸಕಿಯನ್ನು ಕರೆದು ವಿಚಾರಿಸಿದ್ದಾರೆ.
ಆಕೆ ತನ್ನದಲ್ಲವೆಂದು ಹೇಳಿದ್ದು ಬಳಿಕ ಪರಿಶೀಲಿಸಿದ ವೇಳೆ ಈ ಮೊಬೈಲ್ ರೆಕಾರ್ಡಿಂಗ್ ಮಾಡ್ ನಲ್ಲಿರುವುದು ಗೊತ್ತಾಗಿದೆ. ಅದರಲ್ಲಿದ್ದ ವಿಡಿಯೋಗಳನ್ನು ಪರಿಶೀಲಿಸಿದ ವೇಳೆ ತಮ್ಮ ಡ್ರೆಸ್ ಬದಲಿಸುತ್ತಿರುವ ಹಲವು ದೃಶ್ಯಗಳು ಅದರಲ್ಲಿ ರೆಕಾರ್ಡಿಂಗ್ ಆಗಿರುವುದನ್ನು ಕಂಡು ನಟಿ ಗಾಬರಿಯಾಗಿದ್ದಾರೆ. ಈ ಮೊಬೈಲ್, ಕಾಸ್ಟೂಮ್ ಸಹಾಯಕ 24 ವರ್ಷದ ಅಬ್ದುಲ್ ಖಯ್ಯೂಂ ಆನ್ಸಾರಿಗೆ ಸೇರಿದ್ದೆಂದು ತಿಳಿದುಬಂದಿದ್ದು, ಆತನನ್ನು ಕರೆದು ವಿಚಾರಿಸಿದ ವೇಳೆ ಮೊದಲಿಗೆ ನಿರಾಕರಿಸಿದನಾದರೂ ಬಳಿಕ ತಪ್ಪೊಪ್ಪಿಕೊಂಡು ನಟಿಯ ಕಾಲು ಹಿಡಿದಿದ್ದಾನೆ.
ಆದರೂ ಇದಕ್ಕೆ ಕರಗದ ನಟಿ ಆತನ ವಿರುದ್ದ ಕಲಾವಿದರ ಸಂಘ ಹಾಗೂ ಮಾಲ್ವಾನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಅಬ್ದುಲ್ ಖಯ್ಯೂಂ ಆನ್ಸಾರಿಯನ್ನು ಬಂಧಿಸಿ ಬಳಿಕ 15 ಸಾವಿರ ರೂ. ಬಾಂಡ್ ಹಾಗೂ 7 ಸಾವಿರ ರೂ. ನಗದನ್ನು ಠೇವಣಿಯಾಗಿರಿಸಿಕೊಂಡು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.