ನವದೆಹಲಿ: ಪಾಸ್ಪೋರ್ಟ್ ವೆರಿಫಿಕೇಶನ್ಗೆ ಇನ್ನು ಪೊಲೀಸರು ಮನೆಗೆ ತೆರಳಬೇಕಿಲ್ಲ. ಸದ್ಯದಲ್ಲೇ ಇದಕ್ಕೆ ಆನ್ಲೈನ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದ್ದು, ದೇಶದ ಯಾವುದೇ ಮೂಲೆಯಲ್ಲಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೂ ತಿಳಿದುಕೊಳ್ಳಲು ಪೊಲೀಸರಿಗೆ ಸಾಧ್ಯವಾಗಲಿದೆ. ಅಪರಾಧ ಹಾಗೂ ಅಪರಾಧಿಗಳ ಪತ್ತೆ ಜಾಲ ವ್ಯವಸ್ಥೆ (ಸಿಸಿಟಿಎನ್ಎಸ್), ಆಧಾರ್, ಇ-ಫೋಟೋ ಐಡಿ ಹಾಗೂ ಎನ್ಪಿಎಆರ್ ದತ್ತಾಂಶದಲ್ಲಿ ವ್ಯಕ್ತಿಯ ವಿವರ ಪರಿಶೀಲಿಸಲು ಪೊಲೀಸರಿಗೆ ಅವಕಾಶ ಕಲ್ಪಿಸಲಾಗುತ್ತದೆ.
ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯ ವಿಳಾಸ, ಗುರುತು ಹಾಗೂ ಅಪರಾಧ ದಾಖಲೆಗಳನ್ನು ಪತ್ತೆ ಮಾಡಬಹುದಾಗಿದೆ. ಸದ್ಯ ಆನ್ಲೈನ್ ತಪಾಸಣೆಯ ಜತೆಗೆ ಪೊಲೀಸರು ಅರ್ಜಿ ಸಲ್ಲಿಸಿದಾತನ ಮನೆಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದರು. ದೇಶದ ಎಲ್ಲ ಪೊಲೀಸ್ ಠಾಣೆಗಳ ದಾಖಲಾತಿಗಳನ್ನೂ ಸಿಸಿಟಿಎನ್ಎಸ್ ಒಳಗೊಂಡಿದೆ. ಇದರಿಂದ ಅರ್ಜಿ ಸಲ್ಲಿಸಿದ ವ್ಯಕ್ತಿಯ ವಿರುದ್ಧ ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ಇದರಲ್ಲಿ ಪತ್ತೆ ಮಾಡಬಹುದಾಗಿದೆ. ಪೊಲೀಸ್ ಸೂಪರಿಂಟೆಂಡೆಂಟ್ ದರ್ಜೆಯ ಅಧಿಕಾರಿಗಳಿಗೆ ಈ ದತ್ತಾಂಶವನ್ನು ಜಾಲಾಡುವ ಸೌಲಭ್ಯ ಕಲ್ಪಿಸಲಾಗುತ್ತದೆ.
ಅವಧಿ ಇಳಿಕೆ: ಸದ್ಯ ಪೊಲೀಸ್ ಠಾಣೆಗೆ ಪಾಸ್ಪೋರ್ಟ್ ವೆರಿಫಿಕೇಶನ್ಗಾಗಿ ಅರ್ಜಿ ಸಲ್ಲಿಕೆಯಾದರೆ ತಪಾಸಣೆಗೆ 20 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಇದನ್ನು ಈಗ ಒಂದು ವಾರಕ್ಕೆ ಇಳಿಸಲು ನಿರ್ಧರಿಸುವ ಸಾಧ್ಯತೆಯಿದೆ.
