ರಾಷ್ಟ್ರೀಯ

ವ್ಯಾಪಂ ಹಗರಣ; ಬಿಜೆಪಿ, ಕಾಂಗ್ರೆಸ್, ಆರ್‌ಎಸ್ಎಸ್, ಎಬಿವಿಪಿ ನಾಯಕರು, ಅಧಿಕಾರಿಗಳೂ ಶಾಮೀಲು !

Pinterest LinkedIn Tumblr

Vyapam-scam

ಹೊಸದಿಲ್ಲಿ: ಕುಖ್ಯಾತ ಪ್ರವೇಶ ಮತ್ತು ನೇಮಕಾತಿಯ ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐಗೆ ನೀಡಿದ ಬೆನ್ನಲ್ಲೇ, ಇದರ ವ್ಯಾಪ್ತಿ ವಿಸ್ತಾರ ಮತ್ತಷ್ಟು ಬೆಳಕಿಗೆ ಬರುತ್ತಿದೆ. ಬಿಜೆಪಿ, ಕಾಂಗ್ರೆಸ್, ಆರ್‌ಎಸ್ಎಸ್, ಎಬಿವಿಪಿ ನಾಯಕರಲ್ಲದೆ, ಅಧಿಕಾರಿಗಳೂ ಈ ಹಗರಣದಡಿಯಲ್ಲಿ ನಾನಾ ವಿಧವಾಗಿ ಲಂಚ ಪಡೆದಿರುವುದು ಬಯಲಾಗಿದೆ.

ಹಗರಣದ ಪ್ರಮುಖ ಆರೋಪಿ, ಮಧ್ಯಪ್ರದೇಶ ಮೂಲದ ಗಣಿ ದೊರೆ ಸುಧೀರ್ ಶರ್ಮಾ 2010-13ರ ನಡುವೆ ಲಂಚ ಹಾಗೂ ಲಂಚ ರೂಪದಲ್ಲಿ ವಿಮಾನ ಟಿಕೆಟ್‌ನಂಥ ಸೌಲಭ್ಯಗಳನ್ನು ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ನೀಡಿದ್ದಾರೆ ಎಂದು ಆದಾಯ ತೆರಿಗೆ ಲೆಕ್ಕಾಚಾರದ ವರದಿ ತಿಳಿಸಿದೆ. ಇದರಲ್ಲಿ ಆಗಿನ ಬಿಜೆಪಿ ಕಾರ್ಯದರ್ಶಿ, ಪ್ರಸ್ತುತ ಕೇಂದ್ರ ಸಚಿವರಾಗಿರುವವರೊಬ್ಬರ ಹೆಸರೂ ಇದೆ ಎನ್ನಲಾಗಿದೆ.

ಅಲ್ಲದೆ, ಮಧ್ಯಪ್ರದೇಶ ಬಿಜೆಪಿ ಮಾಜಿ ಅಧ್ಯಕ್ಷ ಪ್ರಭಾತ್ ಝಾ ಮತ್ತವರ ಮಕ್ಕಳು, ಕಾಂಗ್ರೆಸ್ ಶಾಸಕ ವೀರ್ ಸಿಂಗ್ ಭುರಿಯಾ ಹಾಗೂ ಇತರೆ ಪ್ರಮುಖ ಅಧಿಕಾರಿಗಳ ಹೆಸರು ಪಟ್ಟಿಯಲ್ಲಿದೆ. ಎಬಿವಿಪಿ ನಾಯಕ ಉಮೇಶ್ ಶರ್ಮಾ ಮತ್ತು ವಿಶಾಲ್ ರಾಜೋರಿಯಾ ಸೇರಿದಂತೆ ಅನೇಕ ಸಂಘ ಪರಿವಾರ ಹಾಗೂ ಕಾಂಗ್ರೆಸ್ ನಾಯಕರ ಹೆಸರೂ ಸುಧೀರ್ ಶರ್ಮಾ ಅವರಿಂದ ಲಂಚ ಪಡೆದವರ ಪಟ್ಟಿಯಲ್ಲಿದೆ.

ಮೂಲತಃ ಶಾಲಾ ಶಿಕ್ಷಕರಾಗಿದ್ದ ಸುಧೀರ್ 2014ರಲ್ಲಿ ಎಸ್‌ಟಿಎಫ್ ಎದುರು ಶರಣಾಗಿದ್ದರು. ಅವರ ಜತೆ ಮಾಜಿ ಶಿಕ್ಷಣ ಸಚಿವ ಲಕ್ಷ್ಮೀಕಾಂತ್ ಶರ್ಮಾ ಹಾಗೂ ಹಗರಣದ ಇತರ ಕೆಲವು ಆರೋಪಿಗಳು ಸೆರೆಯಾಗಿದ್ದಾರೆ.

ಹಗರಣದಲ್ಲಿ ಮುಖ್ಯವಾಗಿ ಭಾಗಿಯಾದ ಕೆಲವು ಶೈಕ್ಷಣಿಕ ಸಂಸ್ಥೆಗಳಿಂದ ಸುಧೀರ್ ಹೇಗೆ ಲಕ್ಷಾಂತರ ಹಣ ಪಡೆದಿದ್ದಾರೆ ಹಾಗೂ ಅದರಲ್ಲಿ ಬಹುತೇಕ ಹಣ ಆಗಿನ ಶಿಕ್ಷಣ ಸಚಿವ ಲಕ್ಷ್ಮೀಕಾಂತ್ ಶರ್ಮಾರಿಗೆ ಹೇಗೆ ಹೋಗುತ್ತಿತ್ತು ಎಂಬಿತ್ಯಾದಿ ವಿವರ ಆದಾಯ ತೆರಿಗೆ ವರದಿಯಲ್ಲಿದೆ.

Write A Comment