ಹೊಸದಿಲ್ಲ: ವ್ಯಾಪಂ ಹಗರಣದ ತನಿಖೆಯನ್ನು ಸುಪ್ರೀಂಕೋರ್ಟ್ ಗುರುವಾರ ಸಿಬಿಐಗೆ ವರ್ಗಾಯಿಸಿದೆ.
ಹಗರಣದಲ್ಲಿ ಭಾಗಿ ಎನ್ನಲಾದ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರ ವಜಾ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಮಧ್ಯಪ್ರದೇಶ ಸರಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಎಚ್.ಎಲ್ ದತ್ತು ನೇತೃತ್ವದ ಪೀಠ ನೋಟಿಸ್ ನೀಡಿದೆ. ಹಗರಣಕ್ಕೆ ಸಂಬಂಧಿಸಿದ ಎಲ್ಲ ನಿಗೂಢ ಸಾವಿನ ಕುರಿತು ಸಿಬಿಐ ತನಿಖೆ ನಡೆಸಲಿದೆ.
ಹಗರಣ ಸಂಬಂಧ ವ್ಯಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜ್ಯಪಾಲರ ವಿರುದ್ಧ ಹೇಳಿಕೆ ದಾಖಲಿಸಿದ್ದರೂ, ಅವರ ವಿರುದ್ಧದ ಎಫ್ಐಆರ್ ರದ್ದು ಪಡಿಸಿದ ಹೈಕೋರ್ಟ್ ಕ್ರಮ ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಕಿಡಿಕಾರಿದೆ.
ಸರಕಾರದ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ, ಇಡೀ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೋರಿದರು. ರಾಜ್ಯಪಾಲರನ್ನು ವಜಾಗೊಳಿಸುವಂತೆ ನ್ಯಾಯವಾದಿ ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ಮನವಿ ಮಾಡಿದರು.
ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಸಲ್ಲಿಸಿದ್ದ ಅರ್ಜಿ ಸೇರಿ 5 ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮಂಗಳವಾರ ಒಪ್ಪಿತ್ತು.
ಈ ಸಂಬಂಧ ಚೊಚ್ಚಲೆಚ್ಚರಿಗರು ಸಲ್ಲಿಸಿರುವ ಅರ್ಜಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸುವುದಾಗಿ ತಿಳಿಸಿರುವ ಸುಪ್ರೀಂಕೋರ್ಟ್, ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಿದೆ.
