ಬೆಂಗಳೂರು,ಜು.9: ಪ್ರತಿಷ್ಠಿತ ಐಟಿ ಉದ್ಯಮಿ ಅಝೀಂ ಪ್ರೇಮ್‌ಜಿ ಅವರು ಭಾರತದ ಮೂರನೆ ಅತ್ಯಂತ ದೊಡ್ಡ ಐಟಿ ಕಂಪೆನಿ ವಿಪ್ರೋದಲ್ಲಿನ ತನ್ನ ಸರಿಸುಮಾರು ಅರ್ಧದಷ್ಟು ಶೇರುಗಳನ್ನು ದತ್ತಿ ಕಾರ್ಯಗಳಿಗಾಗಿ ನೀಡಿದ್ದಾರೆ.
ಪ್ರೇಮ್‌ಜಿಯವರ ಇತ್ತೀಚಿನ ಹೆಜ್ಜೆ ಯಿಂದಾಗಿ ಈ ವರ್ಷ ಅಜೀಂ ಪ್ರೇಮ್‌ಜಿ ಟ್ರಸ್ಟ್‌ನ ನಿಧಿಗೆ ಡಿವಿಡೆಂಡ್ ರೂಪದಲ್ಲಿ ಹೆಚ್ಚುವರಿಯಾಗಿ 530 ಕೋ.ರೂ.ಗಳು ಹರಿದು ಬರಲಿವೆ.
69ರ ಹರೆಯದ ಪ್ರೇಮ್‌ಜಿ ಧರ್ಮಾರ್ಥ ಕಾರ್ಯಗಳಿಗಾಗಿ ತಮ್ಮ ಸಂಪತ್ತಿನ ಹೆಚ್ಚಿನ ಭಾಗವನ್ನು ಕೊಡುಗೆಯಾಗಿ ನೀಡುವಂತೆ ವಿಶ್ವದ ಶ್ರೀಮಂತರನ್ನು ಆಹ್ವಾನಿಸುವ, ಬಿಲಿಯಾಧಿಪತಿಗಳಾದ ವಾರೆನ್ ಬಫೆಟ್ ಮತ್ತು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಪ್ರಾಯೋಜಿಸಿದ್ದ ‘ಗಿವಿಂಗ್ ಪ್ಲೆಜ್’ಗೆ ಮೊದಲು ಸಹಿ ಮಾಡಿದ ಭಾರತೀಯರಾಗಿದ್ದಾರೆ.
ಕಳೆದ 15 ವರ್ಷಗಳಲ್ಲಿ ನನ್ನ ವೈಯಕ್ತಿಕ ದಾನಕಾರ್ಯಗಳ ಮೂಲಕ ಗಿವಿಂಗ್ ಪ್ಲೆಜ್‌ನಲ್ಲಿ ನನ್ನ ನಂಬಿಕೆಯನ್ನು ಕಾರ್ಯರೂಪಕ್ಕಿಳಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ ಎಂದು ಪ್ರೇಮ್‌ಜಿ ಕಂಪೆನಿಯ ಇತ್ತೀಚಿನ ವಾರ್ಷಿಕ ವರದಿಯಲ್ಲಿ ಶೇರುದಾರರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರೇಮ್‌ಜಿ ಈ ಮೊದಲು ಟ್ರಸ್ಟ್‌ಗೆ ವರ್ಗಾಯಿಸಿದ್ದ ಶೇ.21ರಷ್ಟು ಶೇರುಗಳ ವೌಲ್ಯ 4.3 ಶತಕೋಟಿ ಬಿ.ಡಾ.ಗಳಾಗಿದ್ದವು. ಅವರ ನೇತೃತ್ವದ ಪ್ರವರ್ತಕರ ಗುಂಪು ಕಂಪೆನಿಯಲ್ಲಿ ಶೇ.73.39ರಷ್ಟು ಶೇರುಗಳನ್ನು ಹೊಂದಿದೆ. ಹಾರುನ್ ಇಂಡಿಯಾದ ದಾನಶೀಲತೆ ಪಟ್ಟಿಯಂತೆ ಪ್ರೇಮ್‌ಜಿಯವರನ್ನು 2014ನೇ ಸಾಲಿನ ‘ಅತ್ಯಂತ ಉದಾರ ವ್ಯಕ್ತಿ ’ಎಂದು ಪರಿಗಣಿಸಲಾಗಿತ್ತು.
