ಮೆಲ್ಬೋರ್ನ್, ಜೂ.27-ಮನೆಗೆಲಸದ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆಸಿದ ಆರೋಪಕ್ಕೆ ಗುರಿಯಾಗಿರುವ ನ್ಯೂಜಿಲೆಂಡ್ನ ಭಾರತೀಯ ರಾಯಭಾರಿ ರವಿ ತಾಪರ್ ಅವರನ್ನು ಮರಳಿ ಭಾರತಕ್ಕೆ ಕರೆಸಿಕೊಳ್ಳಲಾಗಿದೆ. ನ್ಯೂಜಿಲೆಂಡ್ನ ರಾಯಭಾರ ಕಚೇರಿಯಲ್ಲಿ ಅಡುಗೆ
ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಅವರ ಮೇಲೆ ರವಿ ತಾಪರ್ ಅವರ ಪತ್ನಿ ಶರ್ಮಿಲಾ ದೌರ್ಜನ್ಯ ನಡೆಸಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು.
ಅಡುಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ದೌರ್ಜನ್ಯ ತಡೆಯಲಾಗದೆ ಕತ್ತಲಿನಲ್ಲಿ 20 ಕಿ.ಮೀ. ವಿಲ್ಲಿಂಗ್ಟನ್ನಿಂದ ನಡೆದುಕೊಂಡು ಹೋಗಿ ದೂರದ ರಾಜ್ಯದಲ್ಲಿ ಪತ್ತೆಯಾಗಿದ್ದರು. ಈ ಪ್ರಕರಣ ನ್ಯೂಜಿಲ್ಯಾಂಡ್ನ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಭಾರತದ ರಾಯಭಾರ ಕೇಂದ್ರ ಕಚೇರಿಯ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ. ಮೇ 10 ರಂದು ಪ್ರಕರಣ ವಿದೇಶಾಂಗ ಇಲಾಖೆ ಗಮನಕ್ಕೆ ಬಂದು ತಕ್ಷಣವೇ ಪ್ರತ್ಯೇಕ ತಂಡವೊಂದನ್ನು ಕಳುಹಿಸಿ ನಿಷ್ಪಕ್ಷಪಾತ ತನಿಖೆ ನಡೆಸಲಾಗಿದೆ.
ತನಿಖಾ ವರದಿ ಆಧರಿಸಿ ರವಿ ತಾಪರ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ದೌರ್ಜನ್ಯಕ್ಕೊಳಗಾದ ವ್ಯಕ್ತಿ ಭಾರತಕ್ಕೆ ಮರಳಲು ಇಚ್ಛಿಸಿದ್ದರಿಂದ ಮೇ 28 ರಂದು ಅವರನ್ನು ಸುರಕ್ಷಿತವಾಗಿ ಕರೆಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ರವಿ ತಾಪರ್ ಅವರು ನ್ಯೂಜಿಲ್ಯಾಂಡ್ ಬಿಟ್ಟು ತೆರಳುತ್ತಿರುವುದನ್ನು ಅಲ್ಲಿನ ಪೊಲೀಸರು ಗಮನಿಸಿದ್ದಾರೆ ಎಂದು ವರದಿಯಾಗಿದೆ.