ಮುಂಬೈ: ಅಂತಾರಾಷ್ಟ್ರೀಯ ಚೈನೀಸ್ ಮಾರ್ಷಲ್ ಆಟ್ರ್ಸ್ ಸೂಪರ್ ಸ್ಟಾರ್ ಜೊತೆ ನಟಿಸುವ ಅವಕಾಶವನ್ನು ಬಾಲಿವುಡ್ ನಟಿ ಕತ್ರಿನಾ ಕೈಫ್ ತನ್ನದಾಗಿಸಿಕೊಂಡಿದ್ದಾಳೆ. ತನ್ನ ಮೊದಲ ಅಂತರಾಷ್ಟ್ರೀಯ ಚಿತ್ರದಲ್ಲಿ ಜಾಕಿ ಚಾನ್‍ಗೆ ನಾಯಕಿಯಾಗಿದ್ದು, ಚಿತ್ರಕ್ಕೆ ‘ಕುಂಗ್ ಫೂ ಯೋಗ’ ಎಂದು ಹೆಸರಿಡಲಾಗಿದೆ.
ಸಾಹಸಮಯ ಚಿತ್ರಕ್ಕೆ ಹಾಂಗ್ ಕಾಂಗ್ ಮೂಲದ ನಿರ್ದೇಶಕ ಸ್ಟಾನ್ಲೆ ಟಾಂಗ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ಕತ್ರಿನಾ ಕೂಡ ಹಾಂಗ್ ಕಾಂಗ್‍ನವಳು. ಚೈನೀಸ್ ಯೂನಿವರ್ಸಿಟಿಯ ಭಾರತೀಯ ಪ್ರಾಧ್ಯಾಪಕಿಯ ಪಾತ್ರವನ್ನು ಕತ್ರಿನಾ ನಿರ್ವಹಿಸುತ್ತಿದ್ದರೆ, ಚಾನ್ ಚೈನೀಸ್ ಪುರಾತತ್ವಶಾಸ್ತ್ರಜ್ಞನ ಪಾತ್ರದಲ್ಲಿ ಮಿಂಚಲಿದ್ದಾರೆ.
ಚಿತ್ರದಲ್ಲಿ ಬಹುಳಷ್ಟು ರೋಚಕ ಸ್ಟಂಟ್ ದೃಶ್ಯಗಳಿರಲಿದ್ದು, ಮಾರ್ಷಲ್ ಆಟ್ರ್ಸ್ ಸೂಪರ್ ಸ್ಟಾರ್ ಇದು ಹೊಸದೇನಲ್ಲ. ಆದರೆ ಆಶ್ಚರ್ಯದ ವಿಷಯವೆಂದರೆ ಕತ್ರಿನಾ ಕೂಡ ಆ್ಯಕ್ಷನ್ ಸೀನ್‍ಗಳನ್ನು ಮಾಡಲಿದ್ದಾಳೆ. ಈ ಮುಂಚೆ ‘ಏಕ್ ತಾ ಟೈಗರ್’ ಚಿತ್ರದಲ್ಲೂ ಕತ್ರಿನಾ ಕೆಲವು ಆ್ಯಕ್ಷನ್ ಸ್ಟಂಟ್‍ಗಳನ್ನು ಮಾಡಿದ್ದಳು.
ಈ ಚಿತ್ರದಲ್ಲಿ ನಟ ಅಮೀರ್ ಖಾನ್ ನಟಿಸಬೇಕಿತ್ತು. ಆದರೆ ಈ ಚಿತ್ರವನ್ನು ಒಪ್ಪಿದರೆ ಈಗಾಗಲೇ ಒಪ್ಪಿಂಕೊಂಡಿರುವ ದಂಗಾಲ್ ಚಿತ್ರದ ಶೂಟಿಂಗ್‍ಗೆ ಸಮಯ ನೀಡಲು ಆಗುವುದಿಲ್ಲ ಹೀಗಾಗಿ ‘ಕುಂಗ್ ಫೂ ಯೋಗ’ ಚಿತ್ರದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಅಮೀರ್ ಖಾನ್ ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಚೀನಾ ಪ್ರವಾಸದ ಸಂದರ್ಭದಲ್ಲಿ ಭಾರತ ಮತ್ತು ಚೀನಾದ ಸಾಂಸ್ಕೃತಿಕ ಕಲೆಗಳನ್ನು ತೋರಿಸುವ ಸಿನಿಮಾ ನಿರ್ಮಾಣ ಸಂಬಂಧ ಚೀನಾ ಅಧ್ಯಕ್ಷ ಜಿನ್ ಪಿಂಗ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಹೀಗಾಗಿ ‘ಕುಂಗ್ ಫೂ ಯೋಗ’ ಚಿತ್ರ ನಿರ್ಮಾಣವಾಗುತ್ತಿದೆ.
