ರಾಷ್ಟ್ರೀಯ

ಸುಷ್ಮಾ-ರಾಜೇ ಬೆಂಬಲಕ್ಕೆ ನಿಂತಿರುವ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಬಿಜೆಪಿ ಸಂಸದ; ‘ಲಲಿತ್ ಮೋದಿಗೆ ಸಹಾಯ ಮಾಡಿರುವುದೇ ಸರಿಯಲ್ಲ’

Pinterest LinkedIn Tumblr

R.k.singh

ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಅವರಿಗೆ ಸಹಾಯ ಮಾಡಿದ ಆರೋಪ ಎದುರಿಸುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಬೆಂಬಲಕ್ಕೆ ನಿಂತಿರುವ ಬಿಜೆಪಿ ನಾಯಕರಿಗೆ ಅವರದೇ ಪಕ್ಷದ ಸಂಸದರೊಬ್ಬರು ತಿರುಗೇಟು ನೀಡಿದ್ದಾರೆ.

‘ಲಲಿತ್ ಮೋದಿಗೆ ನೈತಿಕವಾಗಿಯಾಗಲಿ, ಕಾನೂನು ರೀತಿಯಾಗಲಿ, ಯಾವ ರೀತಿಯಿಂದ ಸಹಾಯ ಮಾಡಿದ್ರೂ ಅದು ತಪ್ಪೇ’ ಎಂದು ಬಿಜೆಪಿ ಸಂಸದ ಆರ್.ಕೆ.ಸಿಂಗ್ ಅವರು ಹೇಳಿದ್ದಾರೆ. ಅಲ್ಲದೆ ಮೋದಿಯನ್ನು ಭಾರತಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಲು ಬೇಕಾದ ಅಗತ್ಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಲಿಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಮೋದಿ ಸರ್ಕಾರ, ಇದೇ ಮೊದಲ ಬಾರಿಗೆ ಆಡಳಿತರೂಢ ಪಕ್ಷದ ಸಂಸದರೊಬ್ಬರಿಂದ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ.

‘ತಲೆಮರೆಸಿಕೊಂಡಿರುವ ವ್ಯಕ್ತಿಗೆ ಯಾರೇ ಸಹಾಯ ಮಾಡಿದರೂ ಅದು ತಪ್ಪು. ಇದು ನೈತಿಕವಾಗಿ ಹಾಗೂ ಕಾನೂನ ಪ್ರಕಾರವಾಗಿದ್ದರೂ ತಪ್ಪು. ಇನ್ನು ತಲೆಮರೆಸಿಕೊಂಡಿರುವ ವ್ಯಕ್ತಿಯನ್ನು ಭೇಟಿ ಮಾಡುವುದು ಸಹ ದೊಡ್ಡ ತಪ್ಪು’ ಎಂದು ಮಾಜಿ ಗೃಹ ಕಾರ್ಯದರ್ಶಿ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಲಲಿತ್ ಮೋದಿ ಅವರು ಕೋರ್ಟ್ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಸಹಾಯ ಮಾಡುವುದು ಮತ್ತು ಭೇಟಿ ಮಾಡುವುದು ತಪ್ಪು ಎಂದು ಸಿಂಗ್ ಹೇಳಿದ್ದಾರೆ.

ಇನ್ನು ಇದೇ ವೇಳೆ, ಸುಷ್ಮಾ ಸ್ವರಾಜ್ ಹಾಗೂ ವಸುಂಧರಾ ರಾಜೇ ಅವರನ್ನು ಬಿಜೆಪಿ ಸಮರ್ಥಿಸಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್, ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ ಎಂದರು.

Write A Comment