ಬೈಂದೂರು: ಅಮಾನುಷವಾಗಿ ಕೊಲೆಗೀಡಾದ ಬೈಂದೂರು ಪದವಿಪೂರ್ವ ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಖು ಎಂದು ಆಗ್ರಹಿಸಿ ಬೈಂದೂರಿನಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಾರ್ವಜನಿಕರು, ಅಕ್ಷತಾ ಪ್ರಕರಣದಂತಹ ಅಮಾನುಷ ದುಷ್ಕೃತ್ಯಗಳು ಖಂಡನೀಯವಾಗಿದೆ, ಆರೋಪಿಗೆ ಕಠಿಣ ಶಿಕ್ಷೆಯಾದಾಗ ಮಾತ್ರ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬಹುದಾಗಿದೆ. ಹೇನ್ಬೇರ್ ಭಾಗದ ಅರಣ್ಯ ತಪ್ಪಲು ಪ್ರದೇಶದಲ್ಲಿ ಅರಣ್ಯ ಇಲಾಖೆ ಆಕೇಶಿಯಾ ಗಿಡಗಳನ್ನು ನೆಟ್ಟ ಪರಿನಾಮ, ಕಿಡಿಗೇಡಿಗಳಿಗೆ ಅನೈತಿಕ ಚಟುವಟಿಕೆಗಳನ್ನು ನಡೆಸು ಅಡ್ಡಿಯಾಗಿ ಮಾರ್ಪಟ್ಟಿದೆ, ಇಲಾಖೆ ಕಾಲು ದಾರಿಯಲ್ಲಿರುವ ಅಕೇಶಿಯಾ ಗಿಡಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಬಳಿಕ ವಿಶೇಷ ತಹಶೀಲ್ದಾರ ಕಿರಣ ಗೋರಯ್ಯ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಬೈಂದೂರು ವಿಶೇಷ ತಹಶೀಲ್ದಾರ ಕಿರಣ ಗೋರಯ್ಯ, ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.













