ನವದೆಹಲಿ; ಮಹೇಂದ್ರ ಸಿಂಗ್ ಧೋನಿ ಅವರನ್ನು ನಾಯಕತ್ವದಿಂದ ಕೈಬಿಡುವ ಕಾಲ ಸನ್ನಿಹಿತವಾಗಿದೆ ಎಂದು ಭಾರತದ ಮಾಜಿ ಕ್ರಿಕೆಟ್ ಆಟಗಾರ ಮೋಹಿಂದರ್ ಅಮರನಾಥ್ ಅಭಿಪ್ರಾಯಪಟ್ಟಿದ್ದಾರೆ. ಧೋನಿ ಅವರ ರಕ್ಷಣಾತ್ಮಕ ಆಟದ ಧೋರಣೆಯಿಂದ ವಿದೇಶಿ ನೆಲದಲ್ಲಿ ಭಾರತ ಸುದೀರ್ಘ ವೈಫಲ್ಯ ಅನುಭವಿಸಿದೆ ಎಂದು ಮೋಹಿಂದರ್ ವಿಶ್ಲೇಷಿಸಿದರು.
ಧೋನಿ ರಕ್ಷಣಾತ್ಮಕ ನಾಯಕರಾಗಿದ್ದು, ಎದುರಾಳಿಗೆ ಆಟಕ್ಕೆ ಪುನಃ ಹಿಂತಿರುಗಲು ಅವಕಾಶ ನೀಡುತ್ತಾರೆ. ಬೇರಾವುದೇ ಭಾರತ ನಾಯಕನ ರೀತಿಯಲ್ಲಿ ಅವರ ದಾಖಲೆಯು ಸ್ವದೇಶಿ ಮೈದಾನಗಳಲ್ಲಿ ಚೆನ್ನಾಗಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ನಮಗೆ ವಿದೇಶದಲ್ಲಿ ಪಂದ್ಯಗಳನ್ನು ಗೆಲ್ಲಲು ಮನ್ಸೂರ್ ಅಲಿ ಖಾನ್ ಪಟೌಡಿ ಮುಂತಾದ ಆಕ್ರಮಣಕಾರಿ ನಾಯಕರು ಬೇಕಾಗಿದೆ ಎಂದು ಅಮರನಾಥ್ ಹೇಳಿದರು.
ಭಾರತ 2011ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 0-4ರಿಂದ ಸೋತಿದೆ. 2011-12ರಲ್ಲಿ ಆಸ್ಟ್ರೇಲಿಯಾ ವಿರುದ್ಧ 0-4ರಿಂದ ಸೋಲು, ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ 0-1ರಿಂದ ಸೋಲು ಮತ್ತು ನ್ಯೂಜಿಲೆಂಡ್ನಲ್ಲಿ 0-1ರಿಂದ ಸೋಲನುಭವಿಸಿದೆ. ಭಾರತ ವಿದೇಶದ ಟೆಸ್ಟ್ನಲ್ಲಿ ಜಯಗಳಿಸಿದ್ದು 2011ರ ಜೂನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕಿಂಗ್ಸ್ಟನ್ನಲ್ಲಿ ಮಾತ್ರ.
ಧೋನಿ ನಾಯಕತ್ವದಲ್ಲಿ 23 ಟೆಸ್ಟ್ ಪಂದ್ಯಗಳ ಪೈಕಿ 5 ಜಯ ಮಾತ್ರ ಗಳಿಸಿದ್ದರೆ 11 ಪಂದ್ಯಗಳಲ್ಲಿ ಸೋಲನುಭವಿಸಲಾಗಿದೆ. ಭವಿಷ್ಯದ ನಾಯಕರನ್ನು ಕುರಿತು ಅವರ ಆದ್ಯತೆಯೇನು ಎಂದು ಪ್ರಶ್ನಿಸಿದಾಗ, ವಿರಾಟ್ ಕೊಹ್ಲಿ ಜವಾಬ್ದಾರಿ ಹೊರಲು ಸೂಕ್ತರಾಗಿ ಕಾಣುತ್ತಾರೆ ಎಂದು ಅಮರನಾಥ್ ಉತ್ತರಿಸಿದರು. ಗೌತಮ್ ಅನುಭವವಿರುವುದರಿಂದ ಅವರೂ ಕೂಡ ನನ್ನ ಆದ್ಯತೆಯಲ್ಲಿ ಒಬ್ಬರಾಗಿದ್ದಾರೆ.ಆದರೆ ಅವರು ಹೊರಗುಳಿದಿರುವುದರಿಂದ ವಿರಾಟ್ ನನ್ನ ಆಯ್ಕೆ. ವಿವಿಧ ಮಟ್ಟಗಳಲ್ಲಿ ಅವರು ನಾಯಕತ್ವದ ಗುಣಗಳನ್ನು ತೋರಿಸಿದ್ದಾರೆ ಎಂದು ಅಮರನಾಥ್ ಹೇಳಿದರು.
