ಪುತ್ತೂರು, ಜೂ.18: ಆದರ್ಶ ರೈಲು ನಿಲ್ದಾಣ ಯೋಜನೆ ಕಾಮಗಾರಿ ವೀಕ್ಷಿಸಲು ಸಂಸದ ನಳಿನ್ ಕುಮಾರ್ ಕಟೀಲು ಬುಧವಾರ ಪುತ್ತೂರು ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು. ಈ ಸಂದರ್ಭ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ತಾಪಂ ಅಧ್ಯಕ್ಷೆ ಪುಲಸ್ತ್ಯಾ ರೈ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ತಾಲೂಕು ಆರೋಗ್ಯಾಧಿಕಾರಿ ಡಾ.ಬದ್ರುದ್ದೀನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಜೇಶ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಕಾರ್ಯದರ್ಶಿ ಸಾಜ ರಾಧಾಕೃಷ್ಣ ಆಳ್ವ, ಕ್ಯಾಂಪ್ಕೋ ನಿರ್ದೇಶಕ ಸಂಜೀವ ಮಠಂದೂರು, ಮೈಸೂರು ವಿಭಾಗೀಯ ರೈಲ್ವೆ ಸಲಹಾ ಸಮಿತಿ ಸದಸ್ಯ ಸುದರ್ಶನ್ ಜತೆಗೆ ಇದ್ದರು.
ಆದರ್ಶ ರೈಲು ನಿಲ್ದಾಣ ಯೋಜನೆ ಕಾಮಗಾರಿಯಲ್ಲಿ ವಿವಿಧ ಸಮಸೈಗಳ ಬಗ್ಗೆ ಸಂಸದರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ಬಳಸಲು ಯೋಗ್ಯವಲ್ಲದ ರೀತಿಯಲ್ಲಿರುವ ಶೌಚಾಲಯ,ಸೋರುತ್ತಿರುವ ಫ್ಲಾಟ್ ಫಾರಂ ಗಳನ್ನು ವೀಕ್ಷಿಸಿದ ಸಂಸದರು ಇವುಗಳನ್ನು ಕೂಡಲೇ ಸರಿಪಡಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಂಗವಿಕಲರಿಗೆ ಅನುಕೂಲವಾಗುವಂತೆ ಫ್ಲಾಟ್ಫಾರಂ ನಿರ್ಮಿಸಿ, ವಿಶ್ರಾಂತಿ ಕೊಠಡಿ, ಶೌಚಾಲಯ, ಫ್ಲಾಟ್ಫಾರಂನ ಕಾಮಗಾರಿಯನ್ನು 15 ದಿನಗಳೊಳಗೆ ಮುಗಿಸಿ ಕೊಡುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಅವರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ಎಲ್ಲೆಡೆ ಅಶುಚಿತ್ವ ಎದ್ದು ಕಾಣುತ್ತಿತ್ತು. ಈ ಬಗ್ಗೆ ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದಾಗ, ಶುಚಿತ್ವದ ಹೊಣೆಯನ್ನು ಹೊರಗುತ್ತಿಗೆ ನೀಡಲಾಗಿದೆ. ಕೆಲಸ ಮಾಡಿದ ಕಾರ್ಮಿಕರಿಗೆ ಸಂಬಳವೇ ಆಗಿಲ್ಲ. ಆದ್ದರಿಂದ ಮುಷ್ಕರ ಹೂಡಿ, ಕೆಲಸ ನಡೆಸುತ್ತಿಲ್ಲ. ಇದರಿಂದಾಗಿ ಸಮಸ್ಯೆ ಎದುರಾಗಿದೆ ಎಂದು ಅಲವತ್ತುಕೊಂಡರು.
ಈ ಬಗ್ಗೆ ವಿಚಾರಿಸಿದಾಗ ಸರ್ಕಾರದಿಂದ ಮೇ ತಿಂಗಳ ವೇತನ ಬಿಡುಗಡೆಯಾಗದಿರುವ ಮಾಹಿತಿ ದೊರಕಿತು. ರೋಗ ನಿವಾರಣಾ ಕೇಂದ್ರವಾಗಿರುವ ಆಸ್ಪತ್ರೆಯಲ್ಲೇ ರೋಗಭೀತಿ ತುಂಬಿದರೆ ಹೇಗೆ ಎಂದು ಪ್ರಶ್ನಿಸಿದ ಸಂಸದರು, ಕೂಡಲೇ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟವರಲ್ಲಿ ಮಾತನಾಡಿ, ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.

