ಕನ್ನಡ ವಾರ್ತೆಗಳು

ಜೂ.21ರಂದು ರಾಜ್‌ಪಥ್‌ನಲ್ಲಿ ನಡೆಯುವ ವಿಶ್ವಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಜತೆ ಡಾ.ವೀರೇಂದ್ರ ಹೆಗ್ಗಡೆ ಯೋಗ 

Pinterest LinkedIn Tumblr
Dr_Veerendra_Hegde
ಬೆಳ್ತಂಗಡಿ, ಜೂ.18: ಹೊಸದಿಲ್ಲಿಯ ರಾಜ್‌ಪಥ್‌ನಲ್ಲಿ ಜೂ.21ರಂದು ನಡೆಯುವ ಸಾಮೂಹಿಕ ವಿಶ್ವಯೋಗ ದಿನಾಚರಣೆಯ ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅದೇ ದಿನ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಯೋಗ ದಿನಾಚರಣೆ ನಡೆಯಲಿದೆ ಎಂದು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ.ಪ್ರಶಾಂತ ಶೆಟ್ಟಿ ತಿಳಿಸಿದ್ದಾರೆ
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಡಾ.ಹೆಗ್ಗಡೆ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ವತಿಯಿಂದ 2014 ರಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಗಳ 47 ವಿವಿಧ ಕೇಂದ್ರಗಳಲ್ಲಿ ಏಕಕಾಲದಲ್ಲಿ 62,827 ವಿದ್ಯಾರ್ಥಿಗಳಿಗೆ ಸಾಮೂ ಹಿಕವಾಗಿ ಯೋಗದ ಪ್ರಾತ್ಯಕ್ಷಿಕೆ ನಡೆಸಿದ್ದು ಗಿನ್ನಿಸ್ ದಾಖಲೆಯಾಗಿತ್ತು. ವಿಶ್ವಮಟ್ಟದಲ್ಲೇ ಎಲ್ಲರ ಗಮನ ಸೆಳೆದಿತ್ತು. ರಾಜ್‌ಪಥ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾತ್ರವಲ್ಲದೆ ದಿಲ್ಲಿಯ ವಿಜ್ಞಾನ ಮಂದಿರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದಲ್ಲೂ ಮುಖ್ಯ ಅತಿಥಿಗಳಾಗಿ ಡಾ.ಹೆಗ್ಗಡೆ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
 ಶಾಂತಿವನ ಸಂಸ್ಥೆಯ ಮೂಲಕ ಭಾರತ ಸರಕಾರದ ಆಯುಷ್ ಮಂತ್ರಾಲಯದ ನಿರ್ದೇ ಶನದಂತೆ ರಾಜ್ಯದ ದ.ಕ., ಕೊಡಗು, ರಾಮನಗರ, ಚಿಕ್ಕಮಗಳೂರು, ಹಾಸನ, ಚಿತ್ರದುರ್ಗ, ಚಾಮ ರಾಜನಗರ ವ್ಯಾಪ್ತಿಯಲ್ಲಿ ಒಂದು ತಿಂಗಳ ಉಚಿತ ಯೋಗ ಶಿಬಿರ ನಡೆಯಲಿದೆ. ಜೂ.21ರಂದು ಸುಮಾರು 4 ಕೇಂದ್ರಗಳಲ್ಲಿ 7,000 ಮಂದಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ದ.ಕ. ಜಿಲ್ಲೆಗಳ 100 ಶಾಲೆಗಳಲ್ಲಿ ಗಿನ್ನೆಸ್ ದಾಖಲೆಯಲ್ಲಿ ಭಾಗಿಯಾದ ಸುಮಾರು 4 ಸಾವಿರ ವಿದ್ಯಾರ್ಥಿಗಳು ಬೆಳಗ್ಗೆ 8ರಿಂದ 8:30 ರತನಕ ಯೋಗ ಪ್ರದರ್ಶನ ನೀಡಲಿದ್ದಾರೆ .
‘ಶಾಂತಿ, ಸಹಬಾಳ್ವೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಯೋಗ’ ಎಂಬ ಶೀರ್ಷಿಕೆಯಡಿ ಜೂ.21ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ಬೆಳಗ್ಗೆ 7 ಗಂಟೆಯಿಂದ 7:45ರವರೆಗೆ 1,500 ಶಿಬಿರಾರ್ಥಿಗಳಿಂದ ಸಾಮೂಹಿಕ ಯೋಗ ಪ್ರಾತ್ಯಕ್ಷಿಕೆ ನಡೆಯಲಿದೆ. ಶ್ರೀಧ.ಮಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಿ.ಹರ್ಷೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭ ಭಾರತ ಸರಕಾರದ ಯುವಜನ ಸೇವೆಗಳ ಮಂತ್ರಾಲಯ ಪ್ರಾಯೋಜಿತ, ರಾಜ್ಯದ ಎಲ್ಲಾ ವಿ.ವಿ.ಗಳ ಎನ್ನೆಸ್ಸೆಸ್‌ನ ತಲಾ 20 ಪ್ರತಿನಿಧಿಗಳು, ರಾಜೀವಗಾಂಧಿ ಆರೋಗ್ಯ ವಿವಿಯಿಂದ 100 ಪ್ರತಿನಿಧಿಗಳು ಹಾಗೂ ಯೋಜನಾಧಿಕಾರಿಗಳು, 160 ಮಂದಿ ಕಾರ್ಯಕ್ರಮ ಸಂಯೋಜನಾಧಿಕಾರಿಗಳು, ಪ್ರಕೃತಿ ಚಿಕಿತ್ಸಾ ಮತ್ತು ಯೋಗ ಮಹಾವಿದ್ಯಾಲಯದ 500 ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಯೋಗ ಶಿಬಿರಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
 ಶಾಂತಿವನ ಟ್ರಸ್ಟ್ ಕಾರ್ಯ ದರ್ಶಿ ಬಿ.ಸೀತಾರಾಮ ತೋಳ್ಪಡಿತ್ತಾಯ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಐ.ಶಶಿಕಾಂತ ಜೈನ್, ಪ್ರಕೃತಿ ಚಿಕಿತ್ಸಾ ಕಾಲೇಜಿನ ಯೋಗ ಡೀನ್ ಡಾ.ಶಿವಪ್ರಸಾದ ಶೆಟ್ಟಿ ಮುಂತಾದವರು  ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 

Write A Comment