ಕರ್ನಾಟಕ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದತ್ತ ಮುಖ ಮಾಡಿರುವ ಯಡಿಯೂರಪ್ಪ; ಪಕ್ಷದೊಳಗೆ ಮತ್ತೆ ತಳಮಳ

Pinterest LinkedIn Tumblr

yeddyurappa

ಶಿವಮೊಗ್ಗ, ಜೂ.9: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತೆ ರಾಜ್ಯ ರಾಜಕಾರಣದತ್ತ ಮುಖ ಮಾಡುತ್ತಿರುವುದು ಬಹುತೇಕ ಖಚಿತವಾಗಿದೆ. ಸೋಮವಾರ ನಗರದಲ್ಲಿ ಅವರು ನೀಡಿರುವ ಹೇಳಿಕೆ ಇದನ್ನು ಪುಷ್ಟೀಕರಿಸಿದಂತಿದ್ದು, ಬಿಜೆಪಿ ಪಾಳೆಯದಲ್ಲಿ ಸಂಚಲನ ಸೃಷ್ಟಿಸಿದೆ.

ಯಡಿಯೂರಪ್ಪ ಗುಂಪು ಬಿಜೆಪಿಯೊಳಗೆ ಮತ್ತೆ ಚಿಗುರಿಕೊಂಡಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅವರನ್ನು ತರಲು ವರಿಷ್ಠರಿಗೆ ಒತ್ತಡ ಹೇರುತ್ತಿದೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಯ ಚುಕ್ಕಾಣಿಯನ್ನು ಯಡಿಯೂರಪ್ಪನವರ ಕೈಗೆ ನೀಡಬಾರದು ಎಂದು ಬಿಎಸ್‌ವೈ ವಿರೋಧಿ ಬಣ ವರಿಷ್ಠರಿಗೆ ಒತ್ತಡ ಹೇರುತ್ತಿದೆ.

‘ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಮುಖ್ಯ ಗುರಿ. ಇದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. ಈಗಾಗಲೇ ಎಂಟು ಜಿಲ್ಲೆಗಳ ಪ್ರವಾಸ ಪೂರ್ಣಗೊಳಿಸಿದ್ದು, ಆದಷ್ಟು ಶೀಘ್ರದಲ್ಲಿ ಉಳಿದ ಜಿಲ್ಲೆಗಳ ಪ್ರವಾಸ ಕೈಗೊಳ್ಳುವುದಾಗಿ’ ಸಂವಾದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ತಿಳಿಸಿದ್ದಾರೆ. ಚರ್ಚೆಗೆ ಗ್ರಾಸ: ಕಳೆದ ಹಲವು ತಿಂಗಳುಗಳಿಂದ ಯಡಿಯೂರಪ್ಪ ಬಿಜೆಪಿಯ ರಾಜ್ಯಾಧ್ಯಕ್ಷರಾಗುತ್ತಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ದಟ್ಟವಾಗಿ ಹಬ್ಬಿದೆ. ಬಹಿರಂಗವಾಗಿಯೇ ಕೆಲ ಬೆಂಬಲಿಗರು, ಬಿಎಸ್‌ವೈಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವಂತೆ ಹೈಕಮಾಂಡ್‌ಗೆ ಒತ್ತಾಯಿಸಿದ್ದರು. ಆದರೆ ಬಿಜೆಪಿಯ ಹಿರಿಯ ಮುಖಂಡರು ಬಿಎಸ್‌ವೈರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಯಾವುದೇ ಪ್ರಸ್ತಾಪವಿಲ್ಲ. ಪಕ್ಷದ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದ್ದರು.

ಸ್ವತಃ ಬಿಎಸ್‌ವೈ ಕೂಡ, ಸದ್ಯಕ್ಕೆ ನಾನು ರಾಜ್ಯ ರಾಜಕಾರಣದತ್ತ ಆಗಮಿಸುವ ಸೂಚನೆಯಿಲ್ಲ ಎಂದಿದ್ದರು. ಆದರೆ ಇದೀಗ ಏಕಾಏಕಿ ಬಿಎಸ್‌ವೈ ‘ನನಗೆ ರಾಜ್ಯ ರಾಜಕಾರಣದಲ್ಲಿ ಹೆಚ್ಚಿನ ಆಸಕ್ತಿ ಇದೆ’ ಎಂದು ಹೇಳಿರುವುದು ಬಿಜೆಪಿ ಪಾಳೆಯದಲ್ಲಿ ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಖಚಿತ: ಬಿಎಸ್‌ವೈ ಆಪ್ತ ಮೂಲಗಳು ಹೇಳುವ ಪ್ರಕಾರ, ಕೆಲ ತಿಂಗಳುಗಳಲ್ಲಿಯೇ ಬಿಎಸ್‌ವೈ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸುವುದು ಬಹುತೇಕ ನಿಶ್ಚಿತವಾಗಿದೆ. ಈಗಾಗಲೇ ಪಕ್ಷದ ರಾಷ್ಟ್ರೀಯ ಮುಖಂಡರೊಂದಿಗೂ ಸಮಾಲೋಚನೆ ನಡೆಸಿದ್ದು, ಅವರು ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಆದರೆ ಇದರ ವಿರುದ್ಧ ಈಶ್ವರಪ್ಪ ಸೇರಿದಂತೆ ಹಲವು ನಾಯಕರಿಗೆ ಅತೃಪ್ತಿಯಿದ್ದು, ಬಹಿರಂಗ ಸಮಾರಂಭದಲ್ಲೂ ಇದನ್ನು ತೋಡಿಕೊಂಡಿದ್ದಾರೆ. ಇತ್ತೀಚೆಗೆ ಸಮಾರಂಭವೊಂದರಲ್ಲಿ ಯಡಿಯೂರಪ್ಪ ಅವರ ಮುಂದೆಯೇ ‘‘70 ವರ್ಷ ದಾಟಿದವರಿಗೆ ಮೋದಿ ಮಣೆ ಹಾಕುವುದಿಲ್ಲ. ನೆನಪಿಟ್ಟುಕೊಳ್ಳಿ’’ ಎಂದು ಈಶ್ವರಪ್ಪ ಯಡಿಯೂರಪ್ಪರ ಹೆಸರನ್ನು ಉಲ್ಲೇಖಿಸಿ ವ್ಯಂಗ್ಯವಾಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಮುಂದೇನು?: ಬಿಎಸ್‌ವೈ ರಾಜ್ಯಾಧ್ಯಕ್ಷ ಗದ್ದುಗೆಯ ಮೇಲೆ ಕಣ್ಣಿಟ್ಟಿರುವುದು ಅವರ ವಿರೋಧಿ ಪಾಳೇಯದ ನಿದ್ದೆಗೆಡುವಂತೆ ಮಾಡಿದೆ. ಬಿಎಸ್‌ವೈರನ್ನು ಲೋಕಸಭೆಗೆ ಆಯ್ಕೆ ಮಾಡಿ ಸಚಿವ ಸ್ಥಾನ ಕೊಡಿಸಿದರೆ ರಾಜ್ಯ ರಾಜಕಾರಣದಲ್ಲಿ ಅವರ ಹಿಡಿತ ತಪ್ಪಿದಂತಾಗುತ್ತದೆ ಎಂದು ಯೋಜನೆ ರೂಪಿಸಿದ್ದ ವಿರೋಧಿ ಪಾಳೇಯದವರು ಅವರನ್ನು ಲೋಕಸಭೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು. ರಾಜ್ಯಾಧ್ಯಕ್ಷ ಗದ್ದುಗೆಯಿಂದ ಬಿಎಸ್‌ವೈರನ್ನು ದೂರ ಇಡಲು ವಿರೋಧಿ ಬಣದವರು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಪಕ್ಷದ ರಾಷ್ಟ್ರೀಯ ವರಿಷ್ಠರ ಮೇಲೂ ಪ್ರಭಾವ ಬೀರಲು ಮುಂದಾಗಿದ್ದಾರೆ ಎನ್ನಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಪ್ರಸ್ತುತ ರಾಷ್ಟ್ರೀಯ ವರಿಷ್ಠರು ಕೂಡ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಬಿಎಸ್‌ವೈ ಸೂಕ್ತ ಎಂದು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮುಖಂಡರ ಬಳಿ ವಿರೋಧಿಗಳ ಆಟ ನಡೆಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಕೇಂದ್ರ ಬಿಜೆಪಿ ಸರಕಾರದ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಪತ್ರಕರ್ತರ ಸಂಘವು ಬಿಎಸ್‌ವೈ ಜೊತೆಗೆ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ನನಗೆ ರಾಷ್ಟ್ರ ರಾಜಕಾರಣಕ್ಕಿಂತ, ರಾಜ್ಯ ರಾಜರಣದಲ್ಲಿ ಹೆಚ್ಚಿನ ಆಸಕ್ತಿ ಇದೆ’ ಎಂಬ ಹೇಳಿಕೆ ನೀಡಿದ್ದಾರೆ.

Write A Comment