ಷಹಜಹಾನ್ಪುರ, ಜೂ.9: ಪುರಾಣ-ಇತಿಹಾಸಕಾಲದಿಂದಲೂ ಅತ್ಯಂತ ಮಹತ್ವದ ಸ್ಥಾನ ಪಡೆದಿದ್ದ ಉತ್ತರ ಪ್ರದೇಶ ಇಂದು ಎಂಥೆಂತಹ ಘನ ಘೋರ ಕೃತ್ಯಗಳಿಗೆ ಸಾಕ್ಷಿಯಾಗುತ್ತಿದೆ. ಇಲ್ಲಿ ಎಷ್ಟೆಷ್ಟು ಆಘಾತಕಾರಿ ಘಟನೆಗಳು ನಡೆಯುತ್ತಿವೆ ಎನ್ನುವುದಕ್ಕೆ ಇಲ್ಲಿ ನಡೆದಿರುವ ಪತ್ರಕರ್ತನೊಬ್ಬನ ಸಜೀವ ದಹನದ ಕೃತ್ಯ ಮೂಕಸಾಕ್ಷಿಯಾಗಿದೆ.
ಸಮಾಜವಾದಿ ಪಾರ್ಟಿ ಶಾಸಕ ರಾಮಮೂರ್ತಿ ಅವರ ವಿರುದ್ಧ ಲೇಖನವೊಂದನ್ನು ಪ್ರಕಟಿಸಿದ್ದ ಸಾಮಾಜಿಕ ಮಾಧ್ಯಮ ಪತ್ರಕರ್ತ ಜಗೇಂದ್ರಸಿಂಗ್ ಎಂಬುವವರನ್ನು ಶಾಸಕನ ಕಡೆಯವರೆನ್ನಲಾದ ಕೆಲವು ದುಷ್ಕರ್ಮಿಗಳು ಬೆಂಕಿಹಚ್ಚಿ ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲೇ ಇದನ್ನು ಕಂಡ ಕೆಲವರು ಸಿಂಗ್ರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಿ ಜಗೇಂದರ್ ಸಿಂಗ್ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಈ ದುಷ್ಕೃತ್ಯದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯೇ ಖುದ್ದಾಗಿ ಬೆಂಕಿ ಹಚ್ಚಿದ್ದಾನೆ ಎಂದು ಜಗೇಂದರ್ಸಿಮಗ್ ಕುಟುಂಬ ಆರೋಪಿಸಿದೆ. ಪತ್ರಕರ್ತ ಜಗೇಂದರ್ಸಿಂಗ್ ಈ ಶಾಸಕ ರಾಮಮೂರ್ತಿ ಅಕ್ರಮ ಗಣಿಗಾರಿಕೆ, ಭೂ ಕಬಳಿಕೆಗಳ ಬಗ್ಗೆ ವರದಿ ಮಾಡಿದ್ದ. ಅಲ್ಲದೆ ಇತರೆ ಅಕ್ರಮ ಚಟುವಟಿಕೆಗಳಲ್ಲೂ ರಾಮಮೂರ್ತಿ ಭಾಗಿಯಾಗಿದ್ದಾನೆ ಎಂದು ವರದಿ ಹೇಳಿತ್ತು. ಆದರೆ, ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಹೇಳುತ್ತಿದ್ದಾರೆ. ಜಗೇಂದರ್ ಸಿಂಗ್ನನ್ನು ಬಂಧಿಸಲು ಪ್ರಯತ್ನ ನಡೆದಿತ್ತು. ಅಷ್ಟರಲ್ಲಿ ಸಿಂಗ್ ಆತ್ಮಹತ್ಯೆ ಶರಣಾಗಿದ್ದಾನೆ ಎಂಬುದು ಷಹಜಹಾನ್ಫುರ ಪೊಲೀಸರ ಹೇಳಿಕೆಯಾಗಿದೆ.
