ಬೆಂಗಳೂರು, ಜೂ.8: ರಾಜ್ಯದ ಇಂಧನ ಇಲಾಖೆಯಲ್ಲಿ ಖಾಲಿ ಇರುವ 14,948 ಜ್ಯೂನಿಯರ್ ಲೈನ್‌ಮೆನ್‌ಗಳು ಸೇರಿದಂತೆ ಒಟ್ಟು 15,860 ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರು ಇಂದಿಲ್ಲಿ ತಿಳಿಸಿದರು.
14,948 ಜ್ಯೂನಿಯರ್ ಲೈನ್‌ಮೆನ್‌ಗಳನ್ನು ಮೂರು ಹಂತಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಮೊದಲನೆ ಹಂತದಲ್ಲಿ 8080 ಹುದ್ದೆಗಳಿಗೆ ಆಗಸ್ಟ್ ತಿಂಗಳ ವೇಳೆಗೆ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ. ಆದಾದ ಬಳಿಕ ಎರಡನೇ ಹಂತದಲ್ಲಿ 4730 ಹಾಗೂ ಮೂರನೇ ಹಂತದಲ್ಲಿ 2130 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಹುದ್ದೆಗಳಿಗೆ ಮಹಿಳೆಯರು ಅರ್ಜಿ ಹಾಕಬಹುದು. ಆದರೆ, ಅವರಿಗೆ ಮೀಸಲಾತಿ ಎಂಬುದು ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
413 ಸಹಾಯಕ ಎಂಜಿನಿಯರ್‌ಗಳು, 480 ಜ್ಯೂನಿಯರ್ ಎಂಜಿನಿಯರ್‌ಗಳು, ಸಹಾಯಕ ಎಂಜಿನಿಯರ್ (ಸಿವಿಲ್) 4 ಹುದ್ದೆ ಹಾಗೂ 15 ಅಕೌಂಟ್ಸ್ ಆಫೀಸಱ್ಸ್ ಸೇರಿದಂತೆ ಒಟ್ಟು 912 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ನೇಮಕಾತಿ ಜವಾಬ್ದಾರಿಯನ್ನು ಭಾರತೀಯ ನಿರ್ವಹಣಾ ಸಂಸ್ಥೆ (ಐಐ ಎಂ)ಗೆ ವಹಿಸಲಾಗಿದೆ ಎಂದರು.
480 ಸಹಾಯಕ ಎಂಜಿನಿಯರ್‌ಗಳ ಹುದ್ದೆಗಳಿಗೆ 28,615 ಅಭ್ಯರ್ಥಿಗಳು ಶುಲ್ಕ ತುಂಬಿದ್ದು, ಇವರಿಗೆ ಇದೇ 28 ರಂದು ಆನ್‌ಲೈನ್ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಮೈಸೂರು, ದಾವಣಗೆರೆ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಕಲುಬುರುಗಿಯಲ್ಲೂ ಪರೀಕ್ಷೆಗಳು ನಡೆಯಲಿವೆ ಎಂದರು.
ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಲು ಒತ್ತು ನೀಡಲಾಗಿದ್ದು, ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಲಾಗುವುದು. ಐಎಎಂ ನಡೆಸುವ ಪರೀಕ್ಷೆ ನಂತರ 15-20 ದಿನಗಳಲ್ಲಿ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ಲೈನ್‌ಮೆನ್‌ಗಳಿಗೆ ವಿದ್ಯಾರ್ಹತೆ
ಜ್ಯೂನಿಯರ್ ಲೈನ್‌ಮೆನ್‌ಗಳ ಹುದ್ದೆಗಳಿಗೆ ನೇಮಕ ಪ್ರಕ್ರಿಯೆಗೆ ಈ ತಿಂಗಳ 10ರಂದು ಅಧಿಸೂಚನೆ ಹೊರಡಿಸಲಾಗುವುದು. ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದವರು ಎಸ್ಎಸ್ಎಲ್‌ಸಿ ಪಾಸಾಗಿರಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಿವಿಧ ಹಿಂದುಳಿದ ವರ್ಗದವರಿಗೆ 38 ವರ್ಷ, ಪರಿಶಿಷ್ಟ ಸಮುದಾಯದವರಿಗೆ 40 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ನೇಮಕಾತಿ ಪರೀಕ್ಷೆ ರಾಜ್ಯದ 30-35 ಕಡೆ ಒಂದೇ ದಿನ ನಡೆಯಲಿದೆ. ಆಯಾ ವಿದ್ಯುತ್ ಕಂಪೆನಿಗಳ ವ್ಯಾಪ್ತಿಯಲ್ಲೆ ಪರೀಕ್ಷೆಗಳು ನಡೆಯಲಿವೆ ಎಂದರು.
ಅಭ್ಯರ್ಥಿಗಳು 8 ಮೀಟರ್ ಎತ್ತರದ ಕಂಬ ಏರುವುದು ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಜಯಗಳಿಸಿದರೆ ಮಾತ್ರ ನೇಮಕಕ್ಕೆ ಅರ್ಹರಾಗುತ್ತಾರೆ ಎಂದರು.
ಆಯಾ ಜಿಲ್ಲೆಯವರೆ ಸ್ಥಳೀಯ ಹುದ್ದೆಗಳಿಗೆ ನೇಮಕ ಆಗಬೇಕು ಎಂಬ ಉದ್ದೇಶದಿಂದ ನೇಮಕ ಪ್ರಕ್ರಿಯೆ ನಡೆಯಲಿದೆ. ಎಲ್ಲ ಕಡೆ ಅರ್ಜಿ ಹಾಕಿ ಅನಗತ್ಯ ಗೊಂದಲ ಉಂಟಾಗುವುದಕ್ಕೆ ಕಡಿವಾಣ ಹಾಕುವುದು ಇದರ ಉದ್ದೇಶ ಎಂದರು.
ನೇಮಕವಾದವರಿಗೆ 3 ವರ್ಷ ತರಬೇತಿ ಅವಧಿ ಇರಲಿದ್ದು, ಮೊದಲ ವರ್ಷ 10 ಸಾವಿರ, ಎರಡನೇ ವರ್ಷ 11 ಸಾವಿರ ರೂ ಮೂರನೇ ವರ್ಷಕ್ಕೆ 12 ಸಾವಿರ ರೂ ವೇತನ ನೀಡಲಾಗುವುದು ಎಂದರು
ಎಎಲ್ ಎಂಗಳ ನೇಮಕ
ಈಗಾಗಲೇ 1292 ಸಹಾಯಕ ಲೈನ್‌ಮೆನ್‌ಗಳನ್ನು ನೇಮಕ ಮಾಡಲಾಗಿದೆ. ಐಟಿಐ ಮಾಡಿಕೊಂಡವರಿಗಷ್ಟೆ ಆದ್ಯತೆ ನೀಡಲಾಗಿತ್ತು ಎಂದು ಅವರು ಹೇಳಿದರು.
