ಬೆಂಗಳೂರು, ಜೂ.2: ತಮಿಳುನಾಡಿಗೆ ತೆರಳುವ ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳನ್ನು ಇಂದು ಬೆಳಗ್ಗಿನಿಂದಲೇ ಸ್ಥಗಿತಗೊಳಿಸಲಾಗಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಲು ನಿನ್ನೆ ನಡೆದ ಸಂಪುಟ ಸಭೆಯಲ್ಲಿನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಕೆಲ ಕಡೆ ಪ್ರಕ್ಷುದ್ಧ ವಾತಾವರಣ ಇರುವ ಕಾರಣ ನಮ್ಮ ರಾಜ್ಯ ರಸ್ತೆ ಸಾರಿಗೆ ಬಸ್ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿಗೆ ಕಳುಹಿಸದಿರಲು ತೀರ್ಮಾನಿಸಲಾಗಿದೆ.
ಈ ಕುರಿತು ಮಾತನಾಡಿದ ಕೆಎಸ್ಆರ್ಟಿಸಿಯ ಹಿರಿಯ ಅಧಿಕಾರಿಗಳು ಪ್ರತಿದಿನ ಬೆಂಗಳೂರು, ಮೈಸೂರು ಮತ್ತಿತರೆಡೆಯಿಂದ ತಮಿಳುನಾಡಿನ ಚೆನ್ನೈ, ಈರೋಡ್, ಕೊಯಂಬತ್ತೂರು ಸೇರಿದಂತೆ ಇತರೆಡೆ ಸುಮಾರು 160 ಬಸ್ಗಳನ್ನು ನಿಲ್ಲಿಸಲಾಗಿದೆ. ಆದರೆ ಇವುಗಳಲ್ಲಿ ಕೆಲವು ಬಸ್ಗಳನ್ನು ಗಡಿ ಜಿಲ್ಲೆಗಳಾದ ಚಾಮರಾಜನಗರ, ಕೊಳ್ಳೆಗಾಲ, ಗುಂಡ್ಲುಪೇಟೆವರೆಗೆ ಮಾತ್ರ ಸಂಚರಿಸಿ ಪುನಃ ವಾಪಸ್ ಬರುತ್ತಿದೆ. ಈ ಬಗ್ಗೆ ಈಗಾಗಲೇ ಪ್ರಯಾಣಿಕರಿಗೆ ತಿಳಿಸಿ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದ್ದಾರೆ.
ಇಂದು ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಈ ಬಗ್ಗೆ ಹಿರಿಯ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ ಎಂದು ಬೆಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ಗಂಗಣ್ಣಗೌಡ ತಿಳಿಸಿದ್ದಾರೆ. ನಿನ್ನೆ ತಮಿಳುನಾಡಿಗೆ ತೆರಳಿದೆ ಇಂದು ಕೆಲವು ಬಸ್ಗಳು ರಾಜ್ಯಕ್ಕೆ ವಾಪಸ್ ಬಂದಿದ್ದು, ಇಂದು ಮಧ್ಯಾಹ್ನದ ವೇಳೆಗೆ ಬೆಂಗಳೂರು ಸೇರಿದಂತೆ ವಿವಿಧ ಸ್ಥಳಗಳಿಗೆ ತಲುಪಲಿದೆ ಎಂದು ಹೇಳಿದ್ದಾರೆ.
