ಹುಬ್ಬಳ್ಳಿ, ಮೇ 28-ಮುಸ್ಲಿಂರಿಂದ ಅಲ್ಪಸಂಖ್ಯಾತ ಆಯೋಗದ ದುರುಪಯೋಗವಾಗುತ್ತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇಂದಿಲ್ಲಿ ಗಂಭೀರ ಆರೋಪ ಮಾಡಿದರು. ಕರ್ನಾಟಕದ 32 ವರ್ಷಗಳ ಹಿಂದೆ ಸ್ಥಾಪನೆಯಾದ ಅಲ್ಪಸಂಖ್ಯಾತ ಆಯೋಗವು ಸಂಪೂರ್ಣ ಮುಸ್ಲಿಂ ಮಯವಾಗಿದ್ದು,
ಆಯೋಗದ ಅಧಿಕಾರ ಮತ್ತು ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಹಾಗೂ ಶ್ವೇತ ಪತ್ರ ಹೊರಡಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 1983ರಲ್ಲಿ ಆಯೋಗ ಸ್ಥಾಪನೆಯಾಗಿ ಇಲ್ಲಿಯವರೆಗೆ 16 ಅಧ್ಯಕ್ಷರು ಹಾಗೂ ಕೆಎಎಸ್ ದರ್ಜೆಯ ಕಾರ್ಯದರ್ಶಿಗಳು ಅಧಿಕಾರ ನಡೆಸಿದ್ದಾರೆ. ಕೇಂದ್ರ ಮತ್ತು ರಾಜ್ಯದಿಂದ ಬಂದ ಅನುದಾನ ಸಂಪೂರ್ಣ ಮುಸ್ಲಿಂ ಸಮುದಾಯಕ್ಕೆ ಹೋಗುತ್ತಿದೆ. ಇದರಲ್ಲಿ ಸಾವಿರಾರು ಕೋಟಿ ರೂ. ದುರುಪಯೋಗವಾಗಿದೆ ಎಂದು ದೂರಿದರು.
ಅಲ್ಪಸಂಖ್ಯಾತರೆಂದರೆ ಮುಸ್ಲಿಂರಷ್ಟೇ ಅಲ್ಲ, ಕ್ರಿಶ್ಚಿಯನ್, ಸಿಖ್, ಜೈನರೂ ಇದ್ದಾರೆ. ಈ ಸಮಾಜದವರ್ಯಾಗರೂ ಇದುವರೆಗೂ ಅಧ್ಯಕ್ಷರು, ಕಾರ್ಯದರ್ಶಿಗಳಾಗಿಲ್ಲ. ಮುಸ್ಲಿಂರಿಗೆ ಹಜ್ ಯಾತ್ರೆಗೆ ಆಯೋಗದಿಂದ ಅನುದಾನ ಕೊಡುತ್ತಾರೆ. ಅದೇ ರೀತಿ ಕ್ರಿಶ್ಚಿಯನ್, ಜೈನ್, ಸಿಖ್ ಸಮುದಾಯದವರಿಗೆ ಏಕೆ ಅನುದಾನ ಕೊಡುವುದಿಲ್ಲ ಎಂದು ಪ್ರಶ್ನಿಸಿದರು. ಕರ್ನಾಟಕದಲ್ಲಿ 12.2ರಷ್ಟು ಮುಸ್ಲಿಂ, 1.9 ಕ್ರಿಶ್ಚಿಯನ್ನರು, 0.78 ಜೈನರು, 0.73 ಬೌದ್ಧರು, 0.03ರಷ್ಟು ಸಿಖ್‌ರು ಇದ್ದಾರೆ. ಆದರೂ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಸರ್ಕಾರ ಈ ಕೂಡಲೇ ಇದನ್ನು ಸರಿಪಡಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
