ಮಂಗಳೂರು,ಮೇ.25 : ಮಂಗಳೂರು ರೈಲ್ವೇ ವಿಭಾಗ ರಚನೆ ಮಾಡಿದಲ್ಲಿ ಮಾತ್ರ ಕರಾವಳಿ ಭಾಗದ ಎಲ್ಲ ರೀತಿಯ ರೈಲ್ವೇ ಬೇಡಿಕೆಗಳ ಸಹಿತ ಸಮಗ್ರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಮಹತ್ವದ ಹೋರಾಟಕ್ಕೆ ಸಜ್ಜಾಗಬೇಕಿದೆ ಎಂದು ಭಾನುವಾರ ನಡೆದ ರೈಲ್ವೇ ಅದಾಲತ್‌ನಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು. ನಗರದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ನಡೆದ ರೈಲ್ವೇ ಅದಾಲತ್‌ನಲ್ಲಿ ಜನಪ್ರತಿನಿಧಿಗಳ ಸಹಿತ ರೈಲ್ವೇ ಹೋರಾಟ ಸಮಿತಿ ಪ್ರತಿನಿಧಿಗಳು ವಿಚಾರ ಮಂಡಿಸಿ, ಹೋರಾಟ ತೀವ್ರಗೊಳಿಸುವ ಬಗ್ಗೆ ಚರ್ಚಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಹಾಗೂ ದಕ್ಷಿಣ ರೈಲ್ವೇ ಸಲಹಾ ಸಮಿತಿ ಸದಸ್ಯ ಐವನ್ ಡಿಸೋಜ ಮಾತನಾಡಿ, ಜೂ.10ರ ಬಳಿಕ ಸಾರ್ವಜನಿಕರ ರೈಲ್ವೇ ಇಲಾಖೆಗೆ ಸಂಬಂಧಿಸಿದ ವಿಷಯಗಳ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಮಹಾನಗರ ಪಾಲಿಕೆಯ ತನ್ನ ಕಚೇರಿಯಲ್ಲಿ ರೈಲ್ವೇ ಸಲಹಾ ಪೆಟ್ಟಿಗೆ ಆರಂಭಿಸಲಾಗುವುದು ಎಂದರು.
ಕೇಂದ್ರ ರೈಲ್ವೇ ಬಜೆಟ್ ಹಾಗೂ ಇತರ ಸಂದರ್ಭದಲ್ಲಿ ಕರ್ನಾಟಕಕ್ಕೆ ಶೀಘ್ರ ಅನುದಾನ ದೊರಕಿಸಿಕೊಡಲು ಹಿರಿಯ ನಾಯಕರ ಮೂಲಕ ಒತ್ತಡ ಹೇರಲಾಗುವುದು. ಕರಾವಳಿ ಹಾಗೂ ರಾಜ್ಯದ ಇತರ ಭಾಗಗಳಿಂದ ರೈಲ್ವೇ ಇಲಾಖೆಗೆ ಈಗಾಗಲೇ ಸಲ್ಲಿಕೆಯಾಗಿರುವ ಪ್ರಸ್ತಾವನೆಗಳ ಜಾರಿಗೆ ಕ್ರಮ ವಹಿಸಲಾಗುವುದು. ಮಂಗಳೂರು ವಿಭಾಗ ರಚನೆಗೆ ಸರಕಾರದ ಮೇಲೆ ಒತ್ತಡ ಹೇರುವ ಜತೆಗೆ, ಮಂಗಳೂರಿನಲ್ಲಿ ವಿಶ್ವ ಗುಣಮಟ್ಟದ ರೈಲ್ವೇ ನಿಲ್ದಾಣ ಆರಂಭಕ್ಕೆ ಸಂಬಂಧಿಸಿದಂತೆ, ರೈಲ್ವೇ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗುವುದು ಎಂದರು.
ಉಡುಪಿ ರೈಲ್ವೇ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ಮಾತನಾಡಿ, ಕೊಂಕಣ ರೈಲ್ವೇ ವಿಭಾಗವು ಮೊದಲು ಉಳ್ಳಾಲ ನೇತ್ರಾವತಿ ಸೇತುವೆ ವರೆಗೆ ಇತ್ತು. ಆದರೆ, ದಕ್ಷಿಣ ರೈಲ್ವೇ ವಿಭಾಗದ ಒತ್ತಡದಿಂದ ಉಳ್ಳಾಲದಿಂದ ತೋಕೂರು ವರೆಗೆ ಅವರ ಪಾಲಾಗಿ ಹೋಯಿತು. ಹೆಚ್ಚಿನ ಆದಾಯ ತರುವ ಎನ್‌ಎಂಪಿಟಿ ಅವರ ತೆಕ್ಕೆಗೆ ಸೇರುವ ಮೂಲಕ ಕೊಂಕಣ ರೈಲ್ವೇ ನಷ್ಟ ಎದುರಿಸುವಂತಾಯಿತು. ತೋಕೂರಿನಿಂದ ಉಳ್ಳಾಲವರೆಗೆ ದಕ್ಷಿಣ ರೈಲ್ವೆ ತೆಗೆದುಕೊಳ್ಳುವ ಮೂಲಕ ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ ಎಂದರು.
ಮಂಗಳೂರು-ಮಡ್‌ಗಾಂವ್ ಮಧ್ಯೆ ಸಂಚರಿಸುತ್ತಿರುವ ಇಂಟರ್‌ಸಿಟಿ ರೈಲನ್ನು ಎಕ್ಸ್‌ಪ್ರೆಸ್ ರೈಲಾಗಿ ಬದಲಾಯಿಸಿ, ವಾಸ್ಕೋಡಗಾಮ ವರೆಗೆ ವಿಸ್ತರಿಸಬೇಕು. ಸಂಜೆ 6ರಿಂದ ಬೆಳಗ್ಗೆ ವರೆಗೆ ರೈಲು ಪ್ರಯಾಣಿಕರಿಗೆ ಮುಂದಿನ ಪ್ರಯಾಣ ಬಗ್ಗೆ ಮಾಹಿತಿ ನೀಡಬೇಕು. ಟಿಸಿಗಳಿಗೆ ಗನ್‌ಮ್ಯಾನ್ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ನಿಗಮ್ ಬಿ.ವಸಾನಿ, ಪ್ರಮುಖರಾದ ಅಹಮದ್ ಬಾವ, ರಾಮ್‌ಮೋಹನ್ ಮಾರೂರ್, ಮೋಹನ್‌ದಾಸ್ ಪ್ರಭು, ರೈಲ್ವೇ ಹೋರಾಟಗಾರ ಸುದರ್ಶನ ಪುತ್ತೂರು, ದಿನೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



