ಬೆಳ್ತಂಗಡಿ, ಮೇ 23: ಧರ್ಮಸ್ಥಳದ ಮುಖ್ಯ ರಸ್ತೆಯ ಬಳಿ ಕೃಷ್ಣ ಮೃಗದ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪುತ್ತೂರು ಪೊಲೀಸ್ ಅರಣ್ಯ ಸಂಚಾರಿದಳದ ತಂಡ ಶುಕ್ರವಾರ ಬಂಧಿಸಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹೊಸಡಂಬಳ ನಿವಾಸಿಗಳಾದ ರುದ್ರಪ್ಪ (25) ಹಾಗೂ ಕಾಶಪ್ಪ(25) ಎಂಬವರೇ ಬಂಧಿತರು.
ಧರ್ಮಸ್ಥಳದ ಮುಖ್ಯ ರಸ್ತೆಯ ಬಳಿ ಇದ್ದ ಇವರನ್ನು ಪೊಲೀಸ್ ಅರಣ್ಯ ಸಂಚಾರಿ ದಳದ ಎಸೈ ಉಮೇಶ್ ಉಪ್ಪಳಿಗೆ ಮತ್ತು ತಂಡ ಸಂಶಯಗೊಂಡು ವಿಚಾರಿಸಿದಾಗ ಕೂಲಿ ಕೆಲಸಕ್ಕಾಗಿ ಬಂದಿರುವುದಾಗಿ ತಿಳಿಸಿದರು. ಅವರಲ್ಲಿದ್ದ ಚೀಲವನ್ನು ಪರಿಶೀಲನೆ ನಡೆಸಿದಾಗ ಕೃಷ್ಣ ಮೃಗದ ಒಣ ಚರ್ಮ ಪತ್ತೆಯಾಗಿದೆ. ಇದನ್ನು ಮಾರಾಟ ಮಾಡಲು ತಂದಿರಬಹುದೆಂಬ ಅನುಮಾನವಿದೆ. ಹೆಚ್ಚಿನ ವಿವಿರ ತಿಳಿದು ಬಂದಿಲ್ಲ.
ಪತ್ತೆ ಕಾರ್ಯ ನಡೆಸಿದ ತಂಡದಲ್ಲಿ ಪೊಲೀಸ್ ಸಿಬ್ಬಂದಿ ಕರುಣಾಕರ ಗೌಡ, ಕುಶಾಲಪ್ಪಗೌಡ, ಎಚ್.ಆರ್. ರವೀಂದ್ರ, ಬಿ.ಎನ್. ಕರುಣಾಕರ ಹಾಗೂ ಚಾಲಕ ಉಮೇಶ್ ರಾವ್ ಸಹಕರಿಸಿದ್ದರು. ಪ್ರಕರಣ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದೆ.
