ಕನ್ನಡ ವಾರ್ತೆಗಳು

ಬೈಕಿನಲ್ಲಿ ಸಂಚಾರಿಸುತ್ತಿದ್ದ ಭಿನ್ನ ಕೋಮಿನ ಜೋಡಿಯನ್ನು ತಡೆದು ಯುವತಿ ಕಡೆಯವರಿಂದ ಯುವಕನಿಗೆ ಹಲ್ಲೆ

Pinterest LinkedIn Tumblr

Difrent_comunity_fight_1

ಕಡಬ, ಮೇ 23. ಯುವಕನೊಬ್ಬ ಅನ್ಯ ಕೋಮಿನ ಯುವತಿಯೊಬ್ಬಳನ್ನು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ಒಂದು ಕೋಮಿನ ಯುವಕರು ತಡೆದು ಹಲ್ಲೆ ನಡೆಸಿ ಬಳಿಕ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾದ ಘಟನೆ ಶುಕ್ರವಾರ ಸಂಜೆ ಕಡಬ ಠಾಣಾ ವ್ಯಾಪ್ತಿಯ ಕೊಲ ಎಂಬಲ್ಲಿ ನಡೆದಿದೆ. ಯುವಕನನ್ನು ಬಿಹಾರ ಮೂಲದ ಪ್ರಸ್ತುತ ಮಂಗಳೂರಿನ ಮಂಗಳಾದೇವಿಯ ನಿವಾಸಿ ಪಂಕಜ್ ಕುಮಾರ್(20) ಎಂದು ಗುರುತಿಸಲಾಗಿದೆ. ಈತನ ಕುಟುಂಬ ಕಳೆದ ಹದಿನೈದು ವರ್ಷಗಳಿಂದ ಮಂಗಳೂರಿನಲ್ಲಿ ವಾಸವಾಗಿದ್ದು ತುಳು, ಕನ್ನಡ ಬಲ್ಲವನಾಗಿದ್ದಾನೆ.

ಈತ ತನ್ನ ಗೆಳತಿ ಕಡಬದ ನಿವಾಸಿ ಮಂಗಳೂರಿನ ದೇರಳಕಟ್ಟೆ ಕಾಲೇಜಿನ ನರ್ಸಿಂಗ್ ಪ್ರಥಮ ವರ್ಷದ ಮುಸ್ಲಿಂ ವಿದ್ಯಾರ್ಥಿನಿಯನ್ನು ತನ್ನ ಹೊಸ ಪಲ್ಸರ್ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಕಡಬ ಕಡೆಗೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಯುವಕ ಹಾಗೂ ಯುವತಿ ಜಾಲಿ ರೈಡ್ ಮಾಡಿಕೊಂಡು ಬರುತ್ತಿದ್ದಾಗ ಅನುಮಾನಗೊಂಡ ಒಂದು ಕೋಮಿನ ಸ್ಥಳೀಯರು ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗಂಡಿಬಾಗಿಲು ಕ್ರಾಸ್ ಬಳಿ ಬೈಕ್ ತಡೆದು ವಿಚಾರಿಸಿ, ಈರ್ವರಿಗೂ ಚೆನ್ನಾಗಿ ಥಳಿಸಿದ್ದು, ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆನ್ನಲಾಗಿದೆ.

Difrent_comunity_fight_4 Difrent_comunity_fight_2 Difrent_comunity_fight_3

ಯುವತಿ ಹಾಗೂ ಪಂಕಜ್ ಕುಮಾರ್‌ನ ಸಹೋದರಿಯು ಒಂದೇ ತರಗತಿಯಲ್ಲಿ ಕಲಿಯುತ್ತಿದ್ದು, ಇದೇ ಕಾರಣದಿಂದ ಇವರೀರ್ವರೂ ಆತ್ಮೀಯತೆಯಿಂದಿದ್ದರೆನ್ನಲಾಗಿದೆ. ವಿಷಯ ತಿಳಿದ ಕಡಬ ಪೊಲೀಸ್ ಕಾನ್‌ಸ್ಟೇಬಲ್ ಕನಕರಾಜ್ ಸ್ಥಳಕ್ಕಾಗಮಿಸಿ ಯುವಕನನ್ನು ವಶಕ್ಕೆ ತೆಗೆದುಕೊಂಡು ಸ್ಥಳೀಯ ಹಾಲಿನ ಸೊಸೈಟಿಯಲ್ಲಿ ಕುಳ್ಳಿರಿಸಿ ಯುವತಿಯ ಬಗ್ಗೆ ವಿಚಾರಣೆ ಮಾಡಲು ತೆರಳಿದ್ದರು. ಆ ಸಮಯದಲ್ಲಿ ಎರಡೂ ಕೋಮಿನ ಯುವಕರು ಸೇರಲಾರಂಭಿಸಿದ್ದು, ಪರಿಸ್ಥಿತಿ ಸ್ವಲ್ಪಮಟ್ಟಿಗೆ ಉದ್ವಿಗ್ನವಾಯಿತು. ಅಷ್ಟೊತ್ತಿಗೆ ಕಡಬ ಎಎಸ್ಸೈ ಗೋಪಾಲ್, ಕಾನ್‌ಸ್ಟೇಬಲ್ ಪ್ರವೀಣ್ ಸ್ಥಳಕ್ಕಾಗಮಿಸಿ ಯುವಕನನ್ನು ವಶಕ್ಕೆ ತೆಗೆದುಕೊಂಡು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Write A Comment