ಮಂಗಳೂರು, ಮೇ19: ನಗರದ ಲಾಲ್ ಬಾಗ್ ನಲ್ಲಿ ಬಾಡಿಗೆ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪಿಯನ್ನು ಬಂಧಿಸಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಲಾಲ್ ಬಾಗ್ ಬಸ್ ನಿಲ್ದಾಣದ ಹಿಂಬದಿಯಲ್ಲಿರುವ ಲಕ್ಷ್ಮಿಶೇಷ ಅಪಾರ್ಟ್ ಮೆಂಟ್ಸ್ ನ ನೆಲಮಹಡಿಯ ಫ್ಲ್ಯಾಟ್ ನಂ.1 ರಲ್ಲಿ ಬಾಡಿಗೆ ನೆಲೆಯಲ್ಲಿ ವಾಸವಿರುವ ಶಿವಾನಂದ ಶೆಣೈ ಬಂಧಿತ ಆರೋಪಿ. ಈತ ಕ್ರಿಕೆಟ್ ಬೆಟ್ಟಿಂಗ್ ಗಾಗಿ ಹಣವನ್ನು ಸಂಗ್ರಹಿಸುತ್ತಿದ್ದಾನೆ ಎಂಬ ಮಾಹಿತಿ ಪಡೆದಿದ್ದ ಪೊಲೀಸರು ಅಲ್ಲಿಗೆ ದಾಳಿ ನಡೆಸಿದಾಗ ಸಿಕ್ಕಿಬಿದ್ದಿದ್ದಾನೆ. ಬೆಟ್ಟಿಂಗ್ ಗಾಗಿ ಆತ ಹಲವರಿಂದ ಸ್ವೀಕರಿಸಿದ್ದ 2,02,450 ರೂ. ನಗದು ಹಾಗೂ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
