ಮಂಗಳೂರು : ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್‌ಸಿಂಹ ಜೀವಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿ ಪತ್ರಕರ್ತರೊಬ್ಬರು ಕದ್ರಿ ಠಾಣೆಗೆ ನೀಡಿದ್ದ ದೂರಿಗೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಲು ಕೋರ್ಟ್ ಪೊಲೀಸರಿಗೆ ಅನುಮತಿ ನೀಡಿದೆ. ಅದರಂತೆ ಪೊಲೀಸರು ಸಂಸದ ಪ್ರತಾಪ್‌ಸಿಂಹ ವಿರುದ್ಧ ಇಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ್ಯೂಸ್ ಕರ್ನಾಟಕದ ವೆಬ್‌ಸೈಟ್‌ನ ವರದಿಗಾರ ಪುತ್ತೂರಿನ ಬೊಳ್ವಾರ್ ನಿವಾಸಿ ಶ್ರೇಯಸ್ ಎಂಬವರು ಸಂಸದ ಪ್ರತಾಪ್‌ಸಿಂಹ ವಿರುದ್ಧ ಕದ್ರಿ ಠಾಣೆಗೆ ಶುಕ್ರವಾರ ದೂರು ನೀಡಿದ್ದರು.
ಇತ್ತೀಚೆಗೆ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಆರೋಪ ಸಾಬೀತಾಗಿ ನ್ಯಾಯಾಲಯದಿಂದ ಶಿಕ್ಷೆಗೊಳಗಾದ ಬಾಲಿವುಡ್ ನಟ ಸಲ್ಮಾನ್ ಖಾನ್‌ರ ಬಗ್ಗೆ ಅನುಕಂಪ ತೋರಿ ಸಂಸದ ಫೇಸ್‌ಬುಕ್‌ನಲ್ಲಿ ಕಮೆಂಟ್ಸ್ ಹಾಕಿದ್ದರು. ಇದರ ಬಗ್ಗೆ ಶ್ರೇಯಸ್ ಸಂಸದರಿಗೆ ಫೋನ್ ಮಾಡಿ ಅಭಿಪ್ರಾಯ ಕೇಳಿದ್ದರು. ಅಲ್ಲದೆ ಅದನ್ನು ನ್ಯೂಸ್ ಕರ್ನಾಟಕ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದರು.
ಇದನ್ನು ಗಮನಿಸಿದ ಪ್ರತಾಪ್‌ಸಿಂಹ ಶ್ರೇಯಸ್‌ಗೆ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕದ್ರಿ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸಿದರೂ ಎಫ್‌ಐಆರ್ ದಾಖಲಿಸಲು ನ್ಯಾಯಾಲಯದ ಅನುಮತಿ ಪಡೆಯಬೇಕಿತ್ತು. ಅದರಂತೆ ಪೊಲೀಸರು ಇಂದು ನ್ಯಾಯಾಲಯದಿಂದ ಅನುಮತಿ ಪಡೆದು ಸಂಸದರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
