ಕನ್ನಡ ವಾರ್ತೆಗಳು

ಕ್ರಿಕೆಟ್‌ ಬೆಟ್ಟಿಂಗ್‌ನ್ನು ನಡೆಸುತ್ತಿದ್ದ 4 ಮಂದಿ ಸೆರೆ : ನಗದು ಸಹಿತ ಒಟ್ಟು 21,20,000 ರೂ. ಮೌಲ್ಯದ ಸೊತ್ತು ವಶ

Pinterest LinkedIn Tumblr

Betting_five_arest_1

ಮಂಗಳೂರು: ನಗರದಲ್ಲಿ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದ 4 ಮಂದಿಯನ್ನು ಮಂಗಳೂರು ಸಿ.ಸಿ.ಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ  4,90,000 ರೂ. ನಗದು ಸಹಿತ ಒಟ್ಟು 21,20,000 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಜಪ್ಪು ಪಿ.ಎಲ್‌. ಕಂಪೌಂಡಿನ ಶ್ರೀಜೀತ್‌ ಶೆಟ್ಟಿ, (27), ಪಾಂಡೇಶ್ವರ ಶಿವನಗರದ ಪ್ರಜೀಶ್‌ (27), ಎಡಪದವು ಗರೋಡಿ ಬಳಿಯ ಪ್ರಶಾಂತ್‌ (33) ಮತ್ತು ಆಕಾಶ ಭವನ ಬಳಿಯ ಆನಂದನಗರದ ರಾಜೇಶ್‌ (32) ಬಂಧಿತರು.

ನಗರದ ಜೈಲ್‌ ರಸ್ತೆಯಲ್ಲಿ ಮೇ 9 ರಂದು ಸಂಜೆ ಇನ್ನೋವಾ ಕಾರಿನಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯ ಸೋಲು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಪಣವನ್ನಾಗಿಟ್ಟು ಕೊಂಡು ಅಕ್ರಮ ಕ್ರಿಕೆಟ್‌ ಬೆಟ್ಟಿಂಗ್‌ನ್ನು ನಡೆಸುದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ಮಾಡಿ ಈ 4 ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳ ವಶದಿಂದ 4,90,000 ರೂ. ನಗದು, 6 ಮೊಬೈಲ್‌ ಫೋನ್‌ಗಳು , ಲ್ಯಾಪ್‌ಟಾಪ್‌, ಎಂಟಿಎಸ್‌ ಡೊಂಗಲ್‌, ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದ ಇನ್ನೋವಾ ಕಾರು, ಬಜಾಜ್‌ ಪಲ್ಸರ್‌ ಬೈಕ್‌, ಬೆಟ್ಟಿಂಗ್‌ ವ್ಯವಹಾರಗಳ ಬಗ್ಗೆ ಬರೆದಿರುವ ಡೈರಿ, ಮುಂತಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 21,20,000 ರೂ. ಗಳಾಗ ಬಹುದೆಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ಹಾಗೂ ಸೊತ್ತುಗಳನ್ನು ಮುಂದಿನ ಕ್ರಮಕ್ಕಾಗಿ ಬರ್ಕೆ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್‌ ಆಯುಕ್ತ ಎಸ್‌.ಮುರುಗನ್‌ ನಿರ್ದೇಶನದಂತೆ ಡಿಸಿಪಿ ವಿಷ್ಣುವರ್ಧನ ಅವರ ಮಾಗದರ್ಶನದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ವೆಲೆಂಟೈನ್‌ ಡಿ’ಸೋಜಾ, ಪಿಎಸ್‌ಐ ಶ್ಯಾಮ್‌ಸುಂದರ್‌ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Write A Comment